ಜಿಲ್ಲಾ ವಿಪತ್ತು ನಿರ್ವಹಣಾ ಸಿದ್ದತೆ ಬಗ್ಗೆ ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪ್ರಶಂಸೆ
ಕಾರವಾರ, ನ.07, 2023: ಜಿಲ್ಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳು ಸಂಭವಿಸಿದಾಗ ಆ ವಿಪತ್ತುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಕುರಿತಂತೆ ಉತ್ತರ ಕನ್ನಡ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಮಲ್ ಕಿಶೋರ್ ಜಿಲ್ಲಾಡಳಿತ ಕೈಗೊಂಡಿರುವ ಸಿದ್ದತ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನವೆಂಬರ್ 2 ರಂದು ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ ಅಳವಡಿಸಿರುವ ಅತ್ಯಾಧುನಿಕ ಸಂಪರ್ಕ ಸಾಧನಗಳು, ವಿಪತ್ತು ತಲೆದೋರಿದಾಗ ತಕ್ಷಣದಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳು, ಜಿಲ್ಲೆಯಲ್ಲಿರುವ ರಕ್ಷಣಾ ಸಾಧನಗಳು, ವಾಹನಗಳು ಮತ್ತು ಸಿಬ್ಬಂದಿಗಳ ವಿವರ ಮತ್ತು ಅದರ ನಿರ್ವಹಣಾ ವ್ಯವಸ್ಥೆ, ತುರ್ತು ಸಂದರ್ಭದಲ್ಲಿನ ಸಂಪರ್ಕ ವ್ಯವಸ್ಥೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ವ್ಯವಸ್ಥಿತ ವಿಪತ್ತು ನಿರ್ವಹಣಾ ಸಿದ್ದತಾ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳು ಕಂಡುಬಂದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದೆ. ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಸುರಕ್ಷತಾ ಉಪಕರಣಗಳು ಮತ್ತು ಸಿಬ್ಬಂದಿಗಳ ಸೇವೆಯು ತಕ್ಷಣದಲ್ಲಿ ದೊರೆಯುವಂತೆ ವ್ಯವಸ್ಥಿತ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ರಾಜೇಂದ್ರ ಸಿಂಗ್, ಹಿರಿಯ ಸಮಾಲೋಚಕ ಎಸ್.ಕೆ ಘೋಷ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಕೈಗಾ ಕೇಂದ್ರದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.