ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ: ಸಚಿವ ಅಂಗಾರ

 ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ: ಸಚಿವ ಅಂಗಾರ
Share this post

ಉಡುಪಿ, ಸೆ 03, 2022: ಜಿಲ್ಲೆಯಲ್ಲಿನ ಎಂಡೋಸಲ್ಫಾನ್  ಬಾಧಿತರ ಆರೋಗ್ಯ ಸುಧಾರಣೆ ಮತ್ತು ಪುರ್ನವಸತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಅವರು ಇಂದು ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಎಂಡೋಸಲ್ಫಾನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಮಾರ್ಚ್ 2019 ರಿಂದ ಇದುವರೆಗೆ ಹೊಸದಾಗಿ ಗುರುತಿಸಲಾಗಿರುವ 110 ಮಂದಿ ಎಂಡೋಸಲ್ಫಾನ್ ಬಾಧಿತರ ಪಟ್ಟಿಗೆ ಅನುಮೋದನೆ ನೀಡಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದ ಸಚಿವರು, ಎಂಡೋ ಬಾಧಿತರಿಗೆ ಉಚಿತ ಪಡಿತರ ನೀಡುವ ಕುರಿತಂತೆ ಆರೋಗ್ಯ ಇಲಾಖೆಯಿಂದ ಭಾದಿತರ ಪಟ್ಟಿ ಪಡೆದು , ಅವರಿಗೆ ಅಂತ್ಯೋದಯ ಕಾರ್ಡ್‍ಗಳನ್ನು ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಎಂಡೋಸಲ್ಫಾನ್  ರಾಸಾಯನಿಕ ಸಿಂಪಡಣೆಯದ ಅವಧಿಯಲ್ಲಿ ಬಾಧಿತ ಪ್ರದೇಶದಲ್ಲಿ ಹುಟ್ಟಿ ಬೆಳೆದು ಅಥವಾ ವಾಸವಿದ್ದು ನಂತರದಲ್ಲಿ  ಎಂಡೋಸಲ್ಫಾನ್   ಬಾಧಿತವಲ್ಲದ ಪ್ರದೇಶಗಳಿಗೆ ಬಂದು ನೆಲೆಸಿ ವಾಸವಿದು ಅಂಗವಿಕಲತೆಗೆ ಒಳಗಾದ ಅಥವಾ  ಎಂಡೋಸಲ್ಫಾನ್   ಸಂಬಂಧಪಟ್ಟ ಯಾವುದೇ ನ್ಯೂನತೆಗಳು ಕಂಡುಬಂದ ಅಥವಾ ಅವರಿಗೆ ಜನಿಸಿದ ಮಕ್ಕಳಿಗೆ ನ್ಯೂನತೆಗಳು ಕಂಡುಬಂದಾಗ ಅವರನ್ನು ಎಂಡೋಸಲ್ಫಾನ್  ಬಾಧಿತರೆಂದು ಪರಿಗಣಿಸುವ ಕುರಿತಂತೆ ಎಸ್.ಓ.ಪಿ ಯನ್ನು ರಚಿಸಿ ಅದರನ್ವಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗಳನ್ನು ಶೀಘ್ರವಾಗಿ  ಬಗೆಹರಿಸುವ ನಿಟ್ಟಿನಲ್ಲಿ ಕೆ.ಡಿ.ಪಿ ಸಭೆಗಳಲ್ಲಿ ಈ ಬಗ್ಗೆ ಚರ್ಚಾ ವಿಷಯವನ್ನಾಗಿ ಸೇರ್ಪಡೆ ಮಾಡುವಂತೆ  ತಿಳಿಸಿದರು.

ಕುಂದಾಪುರದ ಸೇನಾಪುರದಲ್ಲಿ ಎಂಡೋಸಲ್ಫಾನ್ ಪೀಡಿತ ಅಂಗವಿಕಲರಿಗೆ ಶಾಶ್ವತ ಪುರ್ನವಸತಿ ಕೇಂದ್ರ ಆರಂಭ, ಜಿಲ್ಲೆಯಲ್ಲಿ ಇವರಿಗಾಗಿ ಪ್ರತ್ಯೇಕ ಡೇ ಕೇರ್ ಸೆಂಟರ್ ಆರಂಬಿಸುವ ಬಗ್ಗೆ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ 1980-81 ರಿಂದ 2000-01 ರ ವರೆಗೆ ಕುಂದಾಪುರದ 29, ಉಡುಪಿಯ 5 ಮತ್ತು ಕಾರ್ಕಳದ 9 ಗ್ರಾಮ ಸೇರಿದಂತೆ ಒಟ್ಟು 43 ಗ್ರಾಮಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆಯಾಗಿದ್ದು, ಈ ಗ್ರಾಮಗಳ ಪಕ್ಕದ 43 ಗ್ರಾಮಗಳು ಸೇರಿದಂತೆ ಒಟ್ಟು 86 ಗ್ರಾಮಗಳಲ್ಲಿ ಇದುವರೆಗೆ 28 ಸ್ಕ್ರೀನಿಂಗ್ ಶಿಬಿರ ನಡೆಸಿ ಇದುವರೆಗೆ ಒಟ್ಟು 1705 ಎಂಡೋ ಪೀಡಿತರನ್ನು ಗುರುತಿಸಲಾಗಿದೆ.

ಇವರಲ್ಲಿ130 ಮಂದಿ  ಮೃತಪಟ್ಟಿದ್ದು, ಪ್ರಸ್ತುತ 1575 ಮಂದಿ ಎಂಡೋಸಲ್ಫಾನ್  ಪೀಡಿತರಿದ್ದು, ಇವರಿಗೆ ಮಾಸಾಶನ,ವೈದ್ಯಕೀಯ ಸೌಲಭ್ಯ , ಸಾಧನ ಸಲಕರಣೆ, ಉಚಿತ ಬಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಸಭೆಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಶಾಸಕ ಹಾಲಾಡಿ  ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಜಿಲ್ಲಾದಿಕಾರಿ ಕೂರ್ಮಾರಾವ್ ಎಂ, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ಕುಂದಾಪುರ ಡಿಎಫ್‍ಓ ಆಶೀಶ್ ರೆಡ್ಡಿ, ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಮಾನವ ಹಕ್ಕು ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶಾನುಭೋಗ್ ,ಅರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು  ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!