ದಕ್ಷಿಣ ಕನ್ನಡ: ಬಾಲ ಕಾರ್ಮಿಕರ ಪತ್ತೆಗೆ ಸಮೀಕ್ಷೆ ಆರಂಭ

 ದಕ್ಷಿಣ ಕನ್ನಡ: ಬಾಲ ಕಾರ್ಮಿಕರ ಪತ್ತೆಗೆ ಸಮೀಕ್ಷೆ ಆರಂಭ
Share this post

ಮಂಗಳೂರು, ನ 07, 2021: ಕೋವಿಡ್ ಸೋಂಕಿನಿಂದಾಗಿ ಶಾಲೆಗಳ ಭೌತಿಕ ತರಗತಿಗಳು ನಡೆಯದ ಕಾರಣ ಹಾಗೂ ಕೊರೋನಾ ಕಾರಣಗಳಿಂದಾಗಿ ಪಾಲಕರನ್ನು ಕಳೆದಕೊಂಡ ಮಕ್ಕಳು ಮರಳಿ ಶಾಲೆಗೆ ತೆರಳುತ್ತಿರುವ ಬಗ್ಗೆ ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಸಮೀಕ್ಷೆ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಮತ್ತು ಕೋವಿಡೇತರ ಕಾರಣಗಳಿಂದ ಏಕ ಪೋಷಕತ್ವ ಅಂದರೆ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಅಥವಾ ಇಬ್ಬರನ್ನು ಕಳೆದುಕೊಂಡ ಮಕ್ಕಳು ಪ್ರಸುತ್ತ ಶಾಲೆಗೆ ಹೋಗುತ್ತಿದ್ದಾರೋ ಅಥವಾ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೋ ಎಂಬುದನ್ನು ಕಂಡುಕೊಳ್ಳಲು ಈ ಸಮೀಕ್ಷಾ ಕಾರ್ಯ ನಡೆಯಲಿದೆ.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಅನ್ವಯ 14 ವರ್ಷದೊಳಗಿನ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

15 ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಈ ನಿಯಮವನ್ನು ಉಲ್ಲಂಘಿಸಿದ ಮಾಲೀಕರಿಗೆ 20 ಸಾವಿರದಿಂದ 50,000 ರೂ.ಗಳ ವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.

ಬಾಲ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಚೈಲ್ಡ್ ಲೈನ್ ನಂಬರ್ – 1098, ಕಾರ್ಮಿಕ ಇಲಾಖೆಯ ದೂ. ಸಂ: 0824-2435343, 2433132, 2437479 ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ದೂ. ಸಂ: 2433131ಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ-2016 ರಂತೆ ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರು ಶಿಕ್ಷೆಗೆ ಒಳಪಟ್ಟಲ್ಲಿ ಅಂತಹ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದವರಿಗೆ 5000 ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!