ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ವಿಸ್ತ್ರತ ಗ್ರಂಥಾಲಯ ವಿಭಾಗ ಉದ್ಘಾಟನೆ
ಧರ್ಮಸ್ಥಳ, ಜೂನ್ 15, 2021: ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಗ್ರಂಥಾಲಯವನ್ನು ಮಂಜೂಷಾ ವಸ್ತು ಸಂಗ್ರಹಾಲಯದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಶ್ರುತ ಪಂಚಮಿಯಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಉದ್ಘಾಟಿಸಿದರು.
ಗ್ರಂಥಾಲಯದಲ್ಲಿ 4,707 ತಾಡವಾಲೆ ಹಸ್ತಪ್ರತಿಗಳು, 1468 ಕಾಗದ ಹಸ್ತಪ್ರತಿಗಳು, 302 ಕಲ್ಲಚ್ಚಿನ ಪ್ರತಿಗಳು ಹಾಗೂ 25,637 ಮುದ್ರಿತ ಪುಸ್ತಕಗಳ ಅಮೂಲ್ಯ ಸಂಗ್ರಹವಿದೆ. ಕನ್ನಡ, ಇಂಗ್ಲಿಷ್, ಸಂಸ್ಕೃತ, ತುಳು, ಮರಾಠಿ, ತೆಲುಗು, ಪ್ರಾಕೃತ ಹಾಗೂ ಪಾಲಿ ಭಾಷೆಯಲ್ಲಿ ರಚಿಸಿದ ಅನೇಕ ಕೃತಿಗಳಿವೆ.
ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇಲ್ಲಿ ಬಂದು ತಮ್ಮ ಅಧ್ಯಯನ ಮತ್ತು ಸಂಶೋಧನೆಗೆ ಗ್ರಂಥಾಲಯದ ಸದುಪಯೋಗ ಪಡೆಯುತ್ತಾರೆ.
ಖ್ಯಾತ ಇತಿಹಾಸ ತಜ್ಞ ಮಂಡ್ಯದ ಪ್ರೊ. ಎಚ್.ವಿ. ನರಸಿಂಹಮೂರ್ತಿಯವರು ಇತಿಹಾಸ ಮತ್ತು ಸಂಶೋಧನೆಗೆ ಸಂಬಂಧಿಸಿದ ಒಂದು ಸಾವಿರ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಮೈಸೂರಿನ ಸಮುದಾಯ ಅಧ್ಯಯನ ಕೇಂದ್ರ ಪ್ರಣತಾ ಅವರು 29 ಅಮೂಲ್ಯ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿರುತ್ತಾರೆ.
ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅಮಿತ್, ಶ್ರದ್ಧಾ ಅಮಿತ್, ಮಾನ್ಯ, ಡಾ. ಬಿ. ಯಶೋವರ್ಮ, ಸೋನಿಯಾವರ್ಮ, ಡಿ. ಶ್ರೇಯಸ್ ಕುಮಾರ್, ಡಿ. ನಿಶ್ಚಲ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಡಾ. ವಿಘ್ನರಾಜ ಎಸ್.ಆರ್ ಉಪಸ್ಥಿತರಿದ್ದರು.