ಎಲ್ಲಾ ವರ್ಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಉಸ್ತುವಾರಿ ಕಾರ್ಯದರ್ಶಿ

 ಎಲ್ಲಾ ವರ್ಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಉಸ್ತುವಾರಿ ಕಾರ್ಯದರ್ಶಿ
Share this post

ಮಂಗಳೂರು, ಸೆ.15, 2025: ರಾಜ್ಯ ಹಿಂದುಳಿದ ವರ್ಗ ಆಯೋಗ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಸಮೀಕ್ಷೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಅವರು ಸೋಮವಾರ  ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿದರು.

ಈ ಸಮೀಕ್ಷೆಯಲ್ಲಿ ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ವರ್ಗಗಳ ಪ್ರತಿಯೊಬ್ಬರ ವಿವರಗಳನ್ನು ಪಡೆಯಲಾಗುವುದು. ಈಗಾಗಲೇ ಪ್ರತಿ ಮನೆಗೆ  ಸ್ಟಿಕ್ಕರ್ ಅಂಟಿಸಲಾಗಿದ್ದು,  ಇದರ ಆಧಾರದ ಮೇಲೆ ಜಿಪಿಎಸ್ ಮಾಹಿತಿಯೊಂದಿಗೆ ಸಮೀಕ್ಷೆ ನಡೆಸಲಾಗುವುದು. ಪ್ರತಿ ಮನೆಗೂ ಗಣತಿದಾರರು ಬಂದು ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.  ಸಮೀಕ್ಷೆದಾರರು ವಿವಿಧ 60 ಪ್ರಶ್ನೆಗಳಿಗೆ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ಅವರು ಹೇಳಿದರು.  

ಸಮೀಕ್ಷೆಯಲ್ಲಿ ಪ್ರತಿಯೊಬ್ಬರ ಕುಟುಂಬ ಶೈಕ್ಷಣಿಕ, ವೈವಾಹಿಕ ಸ್ಥಾನಮಾನ, ಸರಕಾರದಿಂದ ಪಡೆದ ಸೌಲಭ್ಯಗಳು, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ವಿವರ,  ಜಮೀನು ವಿವರ,  ಕೃಷಿ ಜಾನುವಾರು, ಕುಡಿಯುವ ನೀರು, ನಿವೇಶನ, ಶೌಚಾಲಯ, ಮತ್ತಿತರ ಮಾಹಿತಿ ಪಡೆಯಲಿದ್ದಾರೆ.  ಹೀಗಾಗಿ ಇದೊಂದು ಸಮಗ್ರ ಸಮೀಕ್ಷೆಯಾಗಿದ್ದು, ಜನರು ಹೇಗಿದ್ದಾರೆ ಎಂಬುದರ ಬಗ್ಗೆ ಸರಕಾರಕ್ಕೆ ಸಮಗ್ರ ಮಾಹಿತಿ ತಿಳಿಯಲಿದೆ. ಇದರಿಂದ ದೊರಕುವ ಮಾಹಿತಿಯು ಸರಕಾರದ ನೀತಿ ನಿರೂಪಣೆಯಲ್ಲಿ ಹಾಗೂ  ವಿವಿಧ ಯೋಜನೆಗಳ ಜಾರಿಗೆ ಸಹಕಾರಿಯಾಗುವುದು ಎಂದು ಹೇಳಿದರು.

ಸಮೀಕ್ಷೆಯಲ್ಲಿ ಯಾವುದೇ ವಿವಾದಾತ್ಮಕ ಪ್ರಶ್ನೆಗಳು ಇರುವುದಿಲ್ಲ. ಪ್ರತಿ ಮನೆಯ ಸಮೀಕ್ಷೆಗೆ ಅಂದಾಜು 40 ನಿಮಿಷ ಸಮಯದ ತಗುಲಲಿದೆ. ಪ್ರತಿ ದಿನ 10 ಮನೆಗಳ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಗೆ ಶಿಕ್ಷಕರು ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂಧಿಗಳನ್ನು ಬಳಸಲಾಗುವುದು.  ಮನೆಗೆ  ಸಮೀಕ್ಷೆದಾರರು ಬಂದಾಗ ಸರಿಯಾದ ಮಾಹಿತಿ ನೀಡಿ ಜನರು ಸಹಕರಿಸಬೇಕು ಎಂದು ತುಳಸಿ ಮದ್ದಿನೇನಿ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ  ಹೆಚ್.ವಿ. ದರ್ಶನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಅಪರ ಜಿಲ್ಲಾಧಿಕಾರಿ  ರಾಜು.ಕೆ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರರು ಉಪಸ್ಥಿತರಿದ್ದರು. 

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!