ಜೆಜೆಎಂನ 2ನೇ ಹಂತದ ಕಾಮಗಾರಿ 7-8 ತಿಂಗಳಲ್ಲಿ ಮುಕ್ತಾಯ: ಡಾ. ಆನಂದ್

 ಜೆಜೆಎಂನ 2ನೇ ಹಂತದ ಕಾಮಗಾರಿ 7-8 ತಿಂಗಳಲ್ಲಿ ಮುಕ್ತಾಯ: ಡಾ. ಆನಂದ್
Share this post
Mangaluru: Jal Jeevan Mission Phase Two Gears Up for Completion

ಮಂಗಳೂರು,ಸೆ.21, 2023: ಗ್ರಾಮೀಣ ಭಾಗದ ಮನೆಗಳಿಗೆ ನಳ್ಳಿ ಮೂಲಕ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯ ಎರಡನೇ ಹಂತದ ಕಾಮಗಾರಿ ಮುಂದಿನ 7-8 ತಿಂಗಳಲ್ಲಿ ಪೂರ್ಣಗಳಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ತಿಳಿಸಿದರು.

ಅವರು ಸೆ.21ರ ಗುರುವಾರ ನಗರದ ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಲಜೀವನ್ ಮಿಷನ್ ಯೋಜನೆಯಲ್ಲಿ ಮೂರು ಹಂತಗಳಲ್ಲಿ ಒಟ್ಟು ಸುಮಾರು 700 ಕಾಮಗಾರಿಗಳು ಇವೆ. ಇವುಗಳಲ್ಲಿ ಪ್ರಥಮ ಹಂತದಲ್ಲಿ ಇರುವ ಎಲ್ಲ 458 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.

ದ್ವಿತೀಯ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 134 ಕಾಮಗಾರಿಗಳು ಇದ್ದು, 25 ಪೂರ್ಣಗೊಂಡಿವೆ. 109 ಪ್ರಗತಿಯಲ್ಲಿದೆ. ತೃತೀಯ ಹಂತದಲ್ಲಿ ಒಟ್ಟು 108 ಕಾಮಗಾರಿಗಳಿದ್ದು, 10 ಪೂರ್ಣಗೊಂಡಿವೆ. 97 ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.

ಯೋಜನಾ ವೆಚ್ಚಕ್ಕಿಂತ ಹೆಚ್ಚು ವೆಚ್ಚ ತಗುಲಿದ ಹಾಗೂ ಜಿಲ್ಲಾ ಮಟ್ಟದಲ್ಲಿ ಅನುಮತಿ ಒದಗಿಸಲು ಅವಕಾಶವಿರುವ ಯೋಜನೆಯ ಪ್ರಥಮ ಹಂತದ 13 ಹಾಗೂ ದ್ವಿತೀಯ ಹಂತದ 15 ಯೋಜನೆಗಳಿಗೆ ಸಭೆಯಲ್ಲಿ ಆರ್ಥಿಕ ಮಂಜೂರಾತಿ ನೀಡಲಾಯಿತು. ಜಿಲ್ಲಾ ಮಟ್ಟದಲ್ಲಿ ಅನುಮತಿ ಒದಗಿಸಲು ಅವಕಾಶ ಇಲ್ಲದ ಐದು ಕಾಮಗಾರಿಗಳು ಅನುಮತಿ ಒದಗಿಸಲು ಅರ್ಹವಾಗಿದೆ ಎಂದು ಶಿಫಾರಸು ಮಾಡಿ ಅನುಮೋದನೆಗಾಗಿ ರಾಜ್ಯ ಮಟ್ಟದ ಸಮಿತಿಗೆ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಘುನಾಥ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇ ಗೌಡ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!