ಡಾI ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ
ಉಡುಪಿ, ಆಗಸ್ಟ್ 2, 2023: ಜಿಲ್ಲಾಡಳಿತ ಉಡುಪಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಸಹಯೋಗದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ತಾಲೂಕು ಆರೋಗ್ಯಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಮಾದಕ ವಸ್ತುಗಳು ,ಮದ್ಯಪಾನ, ದೂಮಪಾನದಂತಹ ದುಶ್ಟಟಗಳಿಂದ ಯುವ ಜನತೆ ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಧೂಮಪಾನ , ಜರ್ದಾ, ಗುಟ್ಕಾ ಸೇವನೆಯಿಂದ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಆದ್ದರಿಂದ ಯುವ ಜನತೆ ಎಲ್ಲಾ ರೀತಿಯ ದುಶ್ಟಟಗಳಿಂದ ದೂರ ಉಳಿಯಬೇಕು ಎಂದರು.
ಯುವಜನತೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ದುಶ್ಟಟಗಳಿಗೆ ದಾಸರಾದವರನ್ನು ಸಕಾಲದಲ್ಲಿ ಗುರುತಿಸಿ, ಅಗತ್ಯ ಚಿಕಿತ್ಸೆ ನೀಡುವುದರಿಂದ ಹಾಗೂ ಮನ: ಪರಿವರ್ತನೆ ಮಾಡುವುದುರಿಂದ , ಆ ಚಟಗಳಿಂದ ಹೊರ ತರಲು ಸಾಧ್ಯವಿದೆ. ಉಡುಪಿ ಜಿಲ್ಲಾಸ್ಪತೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವಿದ್ದು, ಇಲ್ಲಿನ ಆಪ್ತ ಸಮಾಲೋಚಕರು ಅಗತ್ಯ ಚಿಕಿತ್ಸೆ ಮತ್ತು ನೆರವು ನೀಡಲಿದ್ದಾರೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು , ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಿ, ಸಾವಿರಾರು ಮಂದಿಯನ್ನು ದುಶ್ಟಟಗಳಿಂದ ಮುಕ್ತಗೊಳಿಸಿದ್ದರು, ವ್ಯಸನ ಮುಕ್ತ ವ್ಯಕ್ತಿ, ಕುಟುಂಬ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ದೇಶದಾದ್ಯಂತ ಹಾಗೂ ವಿದೇಶದಲ್ಲೂ ಸಹ ಸಂಚರಿಸಿ , ಜನರ ದುಶ್ಟಟಗಳನ್ನೇ ಭಿಕ್ಷೆಯ ರೂಪದಲ್ಲಿ ತಮ್ಮ ಜೋಳಿಗೆಯಲ್ಲಿ ಸಂಗ್ರಹಿಸಿದ್ದರು,ಅವರ ಜನ್ಮದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಶಿವಕುಮಾರ್ ಬಿ ವಂದಿಸಿದರು.