ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯ ಒದಗಿಸಿಕೊಡಲು ಸಲಹೆ
ಮಂಗಳೂರು,ಜು.12, 2023: ಹೊರಗುತ್ತಿಗೆ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಹಾಗೂ ಜಾರಿಗೊಳಿಸಲಾಗಿರುವ ಕಾನೂನುಗಳನ್ನು ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡು ಅದರಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಹಾಸನ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಸೋಮಣ್ಣ ತಿಳಿಸಿದರು.
ಅವರು ಜು.12ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತಂತೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಮಿಕರನ್ನು ಹೊರಗುತ್ತಿಗೆ ಮೂಲಕ ಕೆಲಸಕ್ಕೆ ನೇಮಿಸಿಕೊಂಡಾಗ ಗುತ್ತಿಗೆ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1970 ಅನ್ವಯಿಸುತ್ತದೆ. ಈ ಕಾಯ್ದೆಯಡಿ ಸೇವೆ ಪಡೆಯುವ ಸಂಸ್ಥೆಯನ್ನು ಮೂಲ ಮಾಲೀಕ ಎಂದು ಕರೆಯಲಾಗುತ್ತದೆ. ಹೊರಗುತ್ತಿಗೆ ಸಂಸ್ಥೆಯನ್ನು ಗುತ್ತಿಗೆದಾರ ಎಂದು ಕರೆಯಲಾಗುತ್ತದೆ. ಗುತ್ತಿಗೆದಾರರ ಮೂಲಕ ನೇಮಕಗೊಂಡ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಎಂದು ಕರೆಯಲಾಗುತ್ತದೆ ಎಂದರು.
ಅದರಂತೆ ಸರ್ಕಾರದ ಅಧೀನ ಅಥವಾ ಸ್ವಾಯತ್ತ ಸಂಸ್ಥೆಗಳಲ್ಲಿ ಇಪ್ಪತ್ತು ಮತ್ತು 20ಕ್ಕಿಂತ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ನಿಯೋಜಿಸಿದಲ್ಲಿ, ಪರವಾನಿಗೆ ಪಡೆಯಬೇಕು. ಅವರು ವೇತನ ಪಾವತಿಗೆ ಜವಾಬ್ದಾರರಾಗಿರಬೇಕು ಹಾಗೂ ಪ್ರತಿ ತಿಂಗಳ 5ರಂದು ವೇತನ ಪಾವತಿಸಬೇಕು. ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮುಂದುವರೆಯುವ ಸಾಧ್ಯತೆ ಇರುವಲ್ಲಿ ರಾತ್ರಿ ನಿಲುಗಡೆಗೆ ವಿಶ್ರಾಂತಿ ಕೊಠಡಿಗಳನ್ನು ಮತ್ತು ಕುಡಿಯುವ ನೀರನ್ನು ಒದಗಿಸಬೇಕು. ಪ್ರತಿ 25 ಕಾರ್ಮಿಕರಿಗೂ ಒಂದು ಶೌಚಾಲಯ ಒದಗಿಸಬೇಕು, 50 ಕಾರ್ಮಿಕರಿಗೆ ಒಬ್ಬರಂತೆ ಮೂತ್ರಾಲಯಗಳನ್ನು ಒದಗಿಸಬೇಕು. ಪ್ರಥಮ ಚಿಕಿತ್ಸೆ ಸೌಲಭ್ಯವನ್ನು ಒದಗಿಸಬೇಕು, ಮುಖ್ಯ ಉದ್ಯೋಗದಾತರ ಪ್ರತಿನಿಧಿಯ ಉಪಸ್ಥಿತಿಯಲ್ಲಿ ವೇತನ ವಿತರಣೆ ಮಾಡಬೇಕು ಹಾಗೂ ವೇತನ ಪಾವತಿ ಮತ್ತು ವೇತನವನ್ನು ವಿತರಿಸುವ ಸ್ಥಳ ಮತ್ತು ಸಮಯವನ್ನು ತೋರಿಸುವ ಸೂಚನೆಯನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.
ಮುಖ್ಯವಾಗಿ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಸಿದ ಬಗ್ಗೆ ಪ್ರತಿ ಖಾತ್ರಿ ಪಡಿಸಿಕೊಳ್ಳಬೇಕು. ವೇಜಸ್ ಲಿಸ್ಟ್ ಇದ್ದಲ್ಲಿ ಅಥವಾ ಬ್ಯಾಂಕ್ ಸ್ಟೇಟ್‍ಮೆಂಟ್ ನಲ್ಲಿ ಅದನ್ನು ಪರಿಶೀಲಿಸಿ, ವೇತನ ವಹಿಯಲ್ಲಿ ಸಂಬಂಧಿಸಿದ ನೌಕರರ ಸಹಿ ಪಡೆಯಬೇಕು. ಅದೇ ರೀತಿ ಇಎಸ್‍ಐ, ಪಿಎಫ್ ಪಾವತಿ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ವೃತ್ತಿ ತೆರಿಗೆ ಪಾವತಿಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು, ನೌಕರರಿಗೆ ವೇತನ ಚೀಟಿ ನೀಡಬೇಕು ಹಾಗೂ ಸಂಬಂಧಿಸಿದ ಏಜೆನ್ಸಿಗಳು ನೌಕರರಿಗೆ ಉದ್ಯೋಗ ಚೀಟಿ ನೀಡುವುದರೊಂದಿಗೆ, ಗುತ್ತಿಗೆ ಕಾರ್ಮಿಕರಿಗೆ ಸೇವಾ ಪ್ರಮಾಣ ಪತ್ರ ನೀಡಬೇಕು ಎಂದು ಅವರು ತಿಳಿಸಿದರು.
ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಆಗುವಂತೆ ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ಪರಿಷ್ಕರಿಸಿದ ತುಟ್ಟಿಭತ್ಯೆಯನ್ನು ಸೇರಿಸಿ ಹೊರಗುತ್ತಿಗೆ ನೌಕರರ ವೇತನ ಪಾವತಿ ಮಾಡಬೇಕು, ತುಟ್ಟಿಭತ್ಯೆಯ ಮೊತ್ತವನ್ನು ಇಲಾಖೆಯ ಬಜೆಟ್‍ನಲ್ಲಿ ಕಾಯ್ದಿರಿಸಿಬೇಕು, ಗುತ್ತಿಗೆ ನೌಕರರ ಹಿತಾಸಕ್ತಿಗಾಗಿ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ಮಾರ್ಗಸೂಚಿ ಮತ್ತು ಆದೇಶಗಳನ್ನು https://karmikaspandana.karnataka.gov.in/ ವೆಬ್‍ಸೈಟ್ ಮೂಲಕ ಪರಿಶೀಲಿಸಬಹುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಾಣಿಕ್ಯ, ಪಿ.ಎಫ್ ರಿಜಿನಲ್ ಕಮಿಷನರ್ ಸಂದೀಪ್ ಕುಮಾರ್ ಹಾಗೂ ಇಎಸ್‍ಐ ನ ಸೋಶಿಯಲ್ ಸೆಕ್ಯೂರಿಟಿ ಅಧಿಕಾರಿ ಅಭಿಷೇಕ್ ತೋಮಸ್ ಮಾತನಾಡಿದರು.
ಕಾರ್ಯಗಾರದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಇಲಾಖೆಯ ಮುಖ್ಯಸ್ಥರು, ನಿಗಮ ಮಂಡಳಿಗಳ ಪದಾಧಿಕಾರಿಗಳು, ಹೊರಗುತ್ತಿಗೆ ಏಜೆನ್ಸಿದಾರರಿದ್ದರು.
ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ. ಅವರು ಪ್ರಾಸ್ತವಿಕ ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತೌವ್ರೋ ಸ್ವಾಗತಿಸಿದರು.