ಧರ್ಮಸ್ಥಳ ಲಕ್ಷದೀಪೋತ್ಸವ: ಪಾದಯಾತ್ರೆಯಲ್ಲಿ 25 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆ
ಧರ್ಮಸ್ಥಳ, ನ 16, 2022: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ನಡೆಯುವ ಪಾದಯಾತ್ರೆ ಇದೀಗ 10 ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಇದೇ ನವೆಂಬರ್ 19 ರಂದು ನಡೆಯಲಿರುವ ಪಾದಯಾತ್ರೆಯಲ್ಲಿ ಸುಮಾರು 25 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇಗುಲದವರೆಗೆ ನಡೆಯುವ ಈ ಪಾದಯಾತ್ರೆಯಲ್ಲಿ ಭಕ್ತರು ಶಿವಪಂಚಾಕ್ಷರಿ ಪಠಿಸುತ್ತ ಸಾಗಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಎದುರು ಜ್ಯೋತಿ ಬೆಳಗುವ ಮೂಲಕ ಗಣ್ಯರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹತ್ತನೇ ವರ್ಷದ ಪಾದಯಾತ್ರೆಯಾದ ಕಾರಣ ವಿಶೇಷ ಆಕರ್ಷಣೆಯಾಗಿ ಪಾದಯಾತ್ರೆಯಲ್ಲಿ ಕೊಂಬು, ಕಹಳೆ, ಚೆಂಡೆವಾದನಗಳ ಜೊತೆ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ವೇಷಧಾರಿಗಳು ಹಾಗೂ ಭಜನಾ ತಂಡಗಳು ಪಾಲ್ಗೊಳ್ಳಲಿವೆ.
ಈ ಪಾದಯಾತ್ರೆಯು ಧರ್ಮಸ್ಥಳ ಪ್ರವೇಶಿಸಿದ ಬಳಿಕ, ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಾದಯಾತ್ರೆಯ ಸಂಚಾಲಕರಾದ ಪೂರನ್ ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.