ಜನ ಸಾಮಾನ್ಯರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ: ಕೂರ್ಮಾರಾವ್ ಎಂ
ಉಡುಪಿ, ಸೆಪ್ಟಂಬರ್ 07, 2022: ಜನ ಸಾಮಾನ್ಯರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದರಿಂದ ಜನರು ಯಾವುದೇ ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ ಅವುಗಳಿಂದ ದೂರವಿರಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು.
ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರು ಎಲ್ಲಾ ರೀತಿಯ ರೋಗಗಳ ಹರಡುವಿಕೆ, ಅವುಗಳ ಲಕ್ಷಣ, ಮುಂಜಾಗ್ರತಾ ಕ್ರಮಗಳು, ಅವುಗಳಿಗೆ ಚಿಕಿತ್ಸೆ ಪಡೆಯುವ ಬಗ್ಗೆ ಮಾಹಿತಿ ಹೊಂದಿದಾಗ ಮಾತ್ರ ಸಾಧ್ಯ. ಮುಂಜಾಗ್ರತೆ ಇದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಯಂತ್ರಿಸಬಹುದು ಎಂದರು.
ಸಾಮಾನ್ಯವಾಗಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ. ಇದಕ್ಕೆ ಕಾರಣ ರೋಗವಾಹಕಗಳಾದ ಸೊಳ್ಳೆ ಸೇರಿದಂತೆ ಮತ್ತಿತರ ಕೀಟಗಳಾಗಿವೆ. ಇವುಗಳ ಹತೋಟಿಯ ಬಗ್ಗೆ ಜನಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ಬಗ್ಗೆ ಯೋಜನೆ ರೂಪಿಸಿ ಅದಕ್ಕನುಗುಣವಾಗಿ ಪ್ರತಿ ತಿಂಗಳು ಮಾಹೆವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2028 ರೊಳಗೆ ಜಿಲ್ಲೆಯನ್ನು ಮೇಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ ಇವುಗಳ ಹತೋಟಿಗೆ ಸ್ಥಳೀಯ ಸಂಸ್ಥೆಗಳು ಗ್ರಾಮ ಪಂಚಾಯತ್ ಗಳ ಸಹಕಾರದೊಂದಿಗೆ ನಿಯಂತ್ರಿಸಲು ಮುಂದಾಗಬೇಕು ಎಂದರು.
ಬಾಣಂತಿಯರಿಗೆ ಆರಂಭಿಕ ಹಂತದಲ್ಲಿಯೇ ತಾಯಿ ಕಾರ್ಡು ನೀಡುವುದರೊಂದಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡಿ, ಉತ್ತಮ ಆರೋಗ್ಯ ಹೊಂದುವ ಬಗ್ಗೆ ಸೂಚನೆಗಳನ್ನು ನೀಡುವುದರ ಜೊತೆಗೆ ಪೌಷ್ಠಿಕ ಆಹಾರ ಸೇವನೆಗೆ ಶಿಫಾರಸು ಮಾಡಬೇಕು. ಈ ಕಾರ್ಯವನ್ನು ಆಶಾ ಹಾಗೂ ಆಂಗನವಾಡಿ ಕಾರ್ಯಕರ್ತರು ಮತುವರ್ಜಿ ವಹಿಸಿದಾಗ ಮಾತ್ರ ಶಿಶು ಮತ್ತು ತಾಯಿ ಮರಣವನ್ನು ಕಡಿಮೆಗೊಳಿಸಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹಂದಿ ಜ್ವರದ 217 ಪ್ರಕರಣಗಳು ಕಂಡುಬಂದಿದ್ದು 1 ಸಾವು ಸಂಭವಿಸಿದೆ ಎಂದ ಅವರು ಮಂಕಿ ಫಾಕ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಶಂಕಿತರತನ್ನು ನಿಗಾವಹಿಸಿ ಪರಿಶೀಲಿಸಲಾಗಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವುದಿಲ್ಲ ಒಂದೊಮ್ಮೆ ಬಂದಲ್ಲಿ ಇವುಗಳ ನಿಯಂತ್ರಣ ಹಾಗೂ ಚಿಕಿತ್ಸೆಗೆ ಮುಂದಾಗಬೇಕು ಎಂದರು.
ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಬರುವ ಜಿಲ್ಲೆಯ ರೋಗಿಗಳಿಗೆ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡುವುದರೊಂದಿಗೆ ಚಿಕಿತ್ಸೆ ನೀಡಲು ಖಾಸಗಿ ಆರೋಗ್ಯ ಸಂಸ್ಥೆಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಕ್ಷಯ ರೋಗ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಪರೀಕ್ಷೆಯನ್ನು ಮಾಡಿ, ಸಂಭಾವ್ಯ ಕ್ಷಯರೋಗದ ಪ್ರಕರಣಗಳ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಇದರಿಂದಾಗಿ ರೋಗ ಹರಡುವುದು ತಡೆಯಬಹುದಾಗಿದೆ ಎಂದ ಅವರು ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 9540 ಜನರಿಗೆ ಕ್ಷಯ ಪರೀಕ್ಷೆ ನಡೆಸಿದಾಗ 703 ಪ್ರಕರಣಗಳು ಪತ್ತೆಯಾಗಿದ್ದು ಪ್ರತಿಯೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣವನ್ನು ಎಲ್ಲಾ ಇಲಾಖಾಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಹೆಚ್ಚು ಹೆಚ್ಚು ದಾಳಿಗಳನ್ನು ನಡೆಸಿ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ತಂಬಾಕು ಮುಕ್ತ ಗ್ರಾಮವಾಗಿ ಘೋಷಿಸಲಾದ ಕೋಡಿಬೆಂಗ್ರೆ ಗ್ರಾಮದ ಗ್ರಾಮಸ್ಥರಿಗೆ ಪ್ರಶಂಸನೀಯ ಪ್ರಮಾಣಪತ್ರವನ್ನು ನೀಡಿ ಮಾತನಾಡಿ, ಜಿಲ್ಲೆಯ ಇತರೆ ಗ್ರಾಮಗಳನ್ನು ತಂಬಾಕು ಹಾಗೂ ಮದ್ಯಮುಕ್ತ ಗ್ರಾಮವಾಗಿಸಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಮುನ್ನೆಚ್ಚರಿಕಾ ಡೋಸ್ ನ್ನು ಆರೋಗ್ಯ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಹಾರ ಉತ್ಪನ್ನಗಳ ತಯಾರಕರು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯುವುದರ ಜೊತೆಗೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂದ ಅವರು , ಆಹಾರ ಗುಣಮಟ್ಟದ ಬಗ್ಗೆ ಆಗಿಂದಾಗ್ಗೆ ಮಾದರಿ ಪರೀಕ್ಷೆಗಳನ್ನು ನಡೆಸಿ , ಸಾರ್ವಜನಿಕರಿಂದ ದೂರುಗಳು ಬಂದಾಗ ಕೂಡಲೇ ಅವುಗಳಿಗೆ ಸ್ಪಂದಿಸಿ, ಗುಣಮಟ್ಟವಿಲ್ಲದಿದ್ದಲ್ಲಿ ನಿಯಾಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಹಾಗೂ ವಿವಿಧ ಇಲಾಖೆಗಳ ಹಾಗೂ ಆರೋಗ್ಯ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.