ಆರ್.ಪಿ.ನಾಯ್ಕ ರ ಸ್ವ ಇಚ್ಛೆಯ ವರ್ಗಾವಣೆ ಪುರಸ್ಕರಿಸಬಾರದು‌: ಸರ್ಕಾರಕ್ಕೆ ಮಾಧವ ನಾಯಕ ಆಗ್ರಹ

 ಆರ್.ಪಿ.ನಾಯ್ಕ ರ ಸ್ವ ಇಚ್ಛೆಯ ವರ್ಗಾವಣೆ ಪುರಸ್ಕರಿಸಬಾರದು‌: ಸರ್ಕಾರಕ್ಕೆ ಮಾಧವ ನಾಯಕ ಆಗ್ರಹ
Share this post

ಕಾರವಾರ: ಇಲ್ಲಿನ ನಗರಸಭೆಯ ಪೌರಾಯುಕ್ತ ಆರ್.ಪಿ.ನಾಯ್ಕ ಅವರು ಸ್ವ- ಇಚ್ಛೆಯಿಂದ ಕೋರಿರುವ ವರ್ಗಾವಣೆಯನ್ನು ಸರ್ಕಾರ ಪುರಸ್ಕರಿಸಬಾರದೆಂದು ಮುಖ್ಯಮಂತ್ರಿಗಳಿಗೆ ಇ- ಮೇಲ್ ಮೂಲಕ ಆಗ್ರಹಿಸಿದ್ದೇನೆ.

ಆರ್.ಪಿ.ನಾಯ್ಕ ಅವರು ಸ್ವ- ಇಚ್ಛೆಯ ವರ್ಗಾವಣೆ ಕೇಳಿರುವ ಸುದ್ದಿ ಕೇಳಿ ಬೇಸರವಾಯಿತು‌. ಜಿಲ್ಲೆಯಿಂದ ಸ್ವ- ಇಚ್ಛೆಯಿಂದ ವರ್ಗಾವಣೆ ಕೋರಿ ಪತ್ರ ಬರೆದಿರುವ ಅಧಿಕಾರಿ ಇವರೇ ಮೊದಲು‌ ಅನಿಸುತ್ತದೆ. ಅವರು ಉತ್ತಮ ಕೆಲಸಗಳನ್ನ ಮಾಡಿದ್ದಾರೆ. ನಗರದಲ್ಲಿ ರಸ್ತೆ, ಚರಂಡಿ, ಫುಟ್ ಪಾತ್, ಉದ್ಯಾನಗಳ ನಿರ್ಮಾಣವಾಗಿದೆ. ತ್ಯಾಜ್ಯ ವಿಲೇವಾರಿ, ತ್ಯಾಜ್ಯಗಳ ಪುನರ್ ಬಳಕೆಯಂಥ ಯೋಜನೆಗಳನ್ನ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕಾರವಾರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕೆಲವೊಂದು ಕಹಿ ಘಟನೆಗಳಿಂದ ಅವರಿಗೆ ಮನಸ್ಸಿಗೆ ಬೇಸರವಾಗಿ ಅವರು ವರ್ಗಾವಣೆಗೆ ಇಚ್ಛಿಸಿದ್ದು, ಸರ್ಕಾರ ಅವರ ವರ್ಗಾವಣೆಯನ್ನ ಪುರಸ್ಕರಿಸಬಾರದು‌.

ಕಾರವಾರ ನಗರವನ್ನ ಸ್ವಚ್ಚತೆಯಲ್ಲಿ ದೇಶ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಆರ್.ಪಿ.ನಾಯ್ಕ ಅವರದ್ದು. ಅದು ಅವರಿಂದ ಮಾತ್ರ ಸಾಧ್ಯ, ಬೇರಾರಿಂದಲೂ ಕಷ್ಟಸಾಧ್ಯ.ಡಾ. ನಿತಿನ್ ಪಿಕಳೆ ಅಧ್ಯಕ್ಷರು ಮತ್ತು ಆರ್. ಪಿ. ನಾಯ್ಕ ಪೌರಾಯುಕ್ತರು ಭ್ರಷ್ಟಾಚಾರ ಮಾಡದೆ ಉತ್ತಮ ಆಡಳಿತ ನೀಡುತ್ತಿದ್ದಾರೆ. ಹೀಗಾಗಿ ನಗರಸಭೆಯ ಎಲ್ಲಾ ಅಧಿಕಾರಿ- ಸಿಬ್ಬಂದಿ ವರ್ಗ ಅವರನ್ನು ಹಿಂಬಾಲಿಸುತ್ತಿದೆ. ಹಿಂದೆ ಸಂಜೆ 5.30ಕ್ಕೂ ಸಿಬ್ಬಂದಿಗಳು ಸಿಗುತ್ತಿರಲಿಲ್ಲ. ಆದರೀಗ ಸಂಜೆ 7.30 ಆದರೂ ನಗರಸಭೆಯಲ್ಲಿ ಪೌರಕಾರ್ಮಿಕರು, ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ.

ಆರ್.ಪಿ.ನಾಯ್ಕ ಅವರು ಮಾತಿನಲ್ಲಿ ನಿಷ್ಠುರತೆ ಇದೆ; ಅದು ಆಡಳಿತಕ್ಕಾಗಿ, ಅಭಿವೃದ್ಧಿಗಾಗಿ. ಆದರೆ ಅದನ್ನು ಸಹಿಸಿಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಯಾವ ಗುತ್ತಿಗೆದಾರನಿಗೂ ಅವರು ಕಮಿಷನ್ ಗಾಗಿ ಪೀಡಿಸಿಲ್ಲ. ಆದರೆ ಕಾಮಗಾರಿಗಳನ್ನ ಗುಣಮಟ್ಟದಲ್ಲಿ ಅವರೇ ಸ್ವತಹ ನಿಂತು ಮಾಡಿಸಿಕೊಂಡಿದ್ದಾರೆ. ಇಂಥ ಅಧಿಕಾರಿಗಳನ್ನು ನಾವೆಲ್ಲ ಸಮಾನ ಮನಸ್ಕ ಜನತೆ ಅವರನ್ನು ಉಳಿಸಿಕೊಳ್ಳಬೇಕಿದೆ. ಇಂಥವರು ಸಿಕ್ಕಿದ್ದು ನಮ್ಮ ಪುಣ್ಯ.

ಮಾಧವ ನಾಯಕ
ಅಧ್ಯಕ್ಷ
ಜನಶಕ್ತಿ ವೇದಿಕೆ
ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!