ಕಾರವಾರ: ಅಂತರ್ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ
ಕಾರವಾರ ಮೇ 1, 2022: ಕಾರ್ಮಿಕನ ದುಡಿಮೆಯಿಂದ ದೇಶದ ಆರ್ಥಿಕತೆ ನಿಂತಿದ್ದು, ಮಾಲೀಕ ಮತ್ತು ಕಾರ್ಮಿಕನ ಸಂಬಂಧ ತಂದೆ-ಮಕ್ಕಳಂತಿದ್ದರೆ ದೇಶದ ಅಭಿವೃದ್ಧಿ ಕಾಣಲು ಸಾಧ್ಯ, ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಕಾರ್ಮಿಕ ಇಲಾಖೆ ಉತ್ತರ ಕನ್ನಡ, ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ‘ ಆಯೋಜಿಸಲಾಗಿದ್ದ ಅಂತರ್ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರ ಹಕ್ಕುಗಳ ಹೋರಾಟದ ನೆನಪಿಗಾಗಿ ೧೯೨೩ ಮೇ 1ರಿಂದ ಕಾರ್ಮಿಕ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ. ದುಡಿಮೆ ಇಲ್ಲದೆ ಎಷ್ಟೋ ದೇಶಗಳು ಮಕಾಡೆ ಮಲಗಿವೆ, ಪ್ರಾಮಾಣಿಕವಾಗಿ ಮಾಡುವ ಯಾವುದೇ ಕೆಲಸಕ್ಕೂ ಗೌರವವಿದೆ ಮತ್ತು ಅದನ್ನು ಗೌರವಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀ ಕಾಂತ ಕುರಣೆ ಮಾತನಾಡಿ ಪ್ರತಿಯೊಬ್ಬರು ಕಾರ್ಮಿಕ ಕಾರ್ಡ್ ನ್ನು ಪಡೆದುಕೊಳ್ಳಬೇಕು, ಇದರಿಂದ ಅನೇಕ ಸೌಲಭ್ಯಗಳು ಇದ್ದು ಕಾರ್ಮಿಕನ ಮಕ್ಕಳಿಗೆ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ, ಮಕ್ಕಳ ಮದುವೆಗೆ ಧನಸಹಾಯ, 60 ವರ್ಷದ ಬಳಿಕ ರೂ ೨೦೦೦ ಕಾರ್ಮಿಕ ಪೆನ್ಷನ್ ಹೀಗೆ ಅನೇಕ ಸೌಲಭ್ಯಗಳು ಇವೆ ಅದರ ಸದಪಯೋಗ ಮಾಡಿಕೊಳ್ಳಿ ಎಂದರು.
ಸಾಂಕೇತವಾಗಿ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಹಾಗೂ ಕಿಟ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಅರವಿಂದ ಜಿ. ನಾಯಕ, ಕಾರ್ಮಿಕ ನಿರೀಕ್ಷಕ ತೀರ್ಥಬಾಬು, ಹೆಚ್.ಆರ್.ಪ್ರಕೃತಿ ಮೆಡಿಸಿನ್ ವ್ಯವಸ್ಥಾಪಕ ಚೇತನ್ ರಾಯ್ಕರ್ ಇನ್ನಿತರ ಅಧಿಕಾರಿಗಳು ಹಾಗೂ ಕಾರ್ಮಿಕರು ಇದ್ದರು.
ನ್ಯಾಯವಾದಿ ರಾಜೇಶ್ವರಿ ವಿ. ನಾಯ್ಕ ಕಾರ್ಮಿಕ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಇಲಾಖಾ ಶ್ಯಾಮಲಾ ಸಿ.ಕೆ ಕಾರ‍್ಯಕ್ರಮ ನಿರೂಪಿಸಿದರು. ಶೀಮತಿ ಗೀತಾ ಸಾಳಸ್ಕರ್ ವಂದಿಸಿದರು.