ಕಾಲಮಿತಿಯೊಳಗೆ ಸಮಸ್ಯೆಗಳ ಇತ್ಯರ್ಥ: ಕೂರ್ಮಾರಾವ್
ಉಡುಪಿ, ಮಾ 19, 2022: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಗಂಭೀರವಲ್ಲದ ದೂರುಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು. ಗಂಭೀರ ದೂರುಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಇತ್ಯರ್ಥಪಡಿಸಲಾಗುವುದು. ಈ ಕುರಿತಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಮುದರಂಗಡಿಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರೀಕರು, ವಿಕಲಚೇತನರಿಗೆ ಸಂಬಂಧಪಟ್ಟ ದೂರುಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲಾಗುವುದು ಹಾಗೂ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಎಲ್ಲಾ ದೂರುಗಳನ್ನು ಬಗೆಹರಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಸಾರ್ವಜನಿಕರು ತಮ್ಮ ವಿವಿಧ ಸಮಸ್ಯೆಗಳ ಕುರಿತ ಅಹವಾಲುಗಳನ್ನು ಸಲ್ಲಿಸಿ, ಅಗತ್ಯ ಪರಿಹಾರ ಪಡೆಯುವ ಮೂಲಕ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಮುದರಂಗಡಿ ವ್ಯಾಪ್ತಿಯಲ್ಲಿನ ಸಾರ್ವಜನಿರಿಗೆ ನಿವೇಶನ ನೀಡುವಲ್ಲಿನ ಮತ್ತು ಹಕ್ಕುಪತ್ರ ನೀಡುವಿಕೆಯಲ್ಲಿನ ಸಮಸ್ಯೆಗಳು, ಡೀಮ್ಡ್ ಫಾರೆಸ್ಟ್ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಇಲಾಖೆಗಳು ಗಮನಹರಿಸಬೇಕಿದೆ. ಈ ಭಾಗದ ಕಸ ವಿಲೇವಾರಿ ಸಮಸ್ಯೆ ಕುರಿತಂತೆ ಸುಜ್ಲಾನ್ ಕಂಪೆನಿಗೆ ನೀಡಿರುವ ಭೂಮಿಯಲ್ಲಿನ 25 ಎಕ್ರೆ ಜಾಗವನ್ನು ಕೈಗಾರಿಕಾ ಇಲಾಖೆಯಿಂದ ನೀಡಿದಲ್ಲಿ ಕಸದ ಸಮಸ್ಯೆ ಬಗೆಹರಿಯಲಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ ಕಾಪು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆಯಲಾಗಿದೆ ಹಾಗೂ ಬಜೆಟ್ ವೇಳೆಯ ಚರ್ಚೆಯ ಸಂದರ್ಭದಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರಕಿಸಲು ಪ್ರಯತ್ನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ 15 ಮಂದಿಗೆ ಹಕ್ಕುಪತ್ರ, 30 ಮಂದಿಗೆ ಮಾಸಾಶನ, ಪ.ಜಾತಿ ಮತ್ತು ಪಂಗಡ ನಿಧಿಯಡಿ 28 ಮಕ್ಕಳಿಗೆ ಸ್ಟಡಿ ಚೇರ್ ಮತ್ತಿತರ ಸವಲತ್ತುಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಕಾಪು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಜಿ.ಪಂ.ಮಾಜಿ ಸದಸ್ಯೆ ಶಿಲ್ಪಾ ಜಿ ಸುವರ್ಣ, ಯು.ಪಿ.ಸಿ.ಎಲ್ ನ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಳ್ವಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಮುದರಂಗAಡಿ ಗ್ರಾ.ಪಂ. ಉಪಾಧ್ಯಕ್ಷ ಶರತ ಕುಮಾರ್ ಶೆಟ್ಟಿ ವಂದಿಸಿದರು.