ವಿಧಾನ ಪರಿಷತ್ ಚುನಾವಣೆ: ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ ಗೆಲುವು
ಮಂಗಳೂರು, ಡಿ.14, 2021: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಗೆಲುವಿನ ನಗೆ ಬೀರಿದ್ದಾರೆ.
ಒಟ್ಟು 5,955 ಮತಗಳು ಸಿಂಧು ಮತಗಳಾಗಿದ್ದು, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು 3,672 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 2,079 ಮತಗಳನ್ನು ಪಡೆದು ಪ್ರಥಮ ಪ್ರಾಶಸ್ಯ ಮತದಲ್ಲೇ ವಿಜಯಿಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಈ ಚುನಾವಣೆಗೆ ಸ್ಪರ್ಧಿಸಿದ್ದ ಮತ್ತೊರ್ವ ಅಭ್ಯರ್ಥಿ ಶಾಫಿ ಕೆ ಬೆಳ್ಳಾರೆ 204 ಮತಗಳನ್ನು ಪಡೆದಿದ್ದಾರೆ.
ಮತ ಎಣಿಕಾ ಕಾರ್ಯವು ಡಿ.14ರ ಮಂಗಳವಾರ ನಗರದ ಪಾಂಡೇಶ್ವರದಲ್ಲಿನ ರೋಸಾರಿಯೋ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆಯಿತು. ಒಟ್ಟು 14 ಟೇಬಲ್ಗಳಲ್ಲಿ ಮತ ಎಣಿಕೆ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಮ್ ತೆರೆದು ಮತ ಪೆಟ್ಟಿಗೆಳನ್ನು ಮತ ಎಣಿಕಾ ಕೇಂದ್ರಕ್ಕೆ ತರಲಾಯಿತು.
ನಂತರ ಮತ ಪತ್ರಗಳನ್ನು ಖಾಲಿ ಡ್ರಮ್ ಗೆ ಹಾಕಿ ಅದನ್ನು ಮಿಶ್ರಣ ಮಾಡಲಾಯಿತು. ತದನಂತರ 14 ಟೇಬಲ್ಗಳಲ್ಲಿ ಮತ ಎಣಿಕೆ ಸಿಬ್ಬಂದಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾದ ಕ್ಯಾ. ಮಣಿವಣ್ಣನ್, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಬಂಟ್ವಾಳ ತಹಶೀಲ್ದಾರ್ ರಶ್ಮಿ, ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಕಡಬ ತಹಶೀಲ್ದಾರ್ ಅನಂತ ಶಂಕರ್, ಬೆಳ್ತಂಗಡಿ ತಹಶೀಲ್ದಾರ್ ರಮೇಶ್, ಮೂಡಬಿದಿರೆ ತಹಶೀಲ್ದಾರ್ ಪುಟ್ಟರಾಜ್ ಸೇರಿದಂತೆ ಮತ ಎಣಿಕಾ ಸಿಬ್ಬಂದಿ, ವಿವಿಧ ಪಕ್ಷಗಳ ಏಜೆಂಟರು, ಮುಖಂಡರು, ಸಂಬಂಧಿಸಿದ ಅಧಿಕಾರಿಗಳು ಇದ್ದರು.