ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಸಿದ್ದತೆ: ಸಚಿವ ಶಿವರಾಮ ಹೆಬ್ಬಾರ್
ಕಾರವಾರ, ಜೂನ್ 02, 2021: ಕೋವಿಡ್ ಮೂರನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದ್ದು, ಈ ಕುರಿತು ಈಗಿನಿಂದಲೇ ಚಿಕಿತ್ಸೆಗಾಗಿ ಬೇಕಾಗುವ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್ 3 ನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕಿಗೆ ತುತ್ತಾಗುವ ಬಗ್ಗೆ ತಜ್ಞರು ಸಲಹೆ ನೀಡಿರುವುದರಿಂದ, ಮತ್ತು ಆತಂಕವಿರುವುದರಿಂದ ತಕ್ಷಣ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ವಿವಿಧ ಅಧಿಕಾರಿ, ಸರಕಾರಿ ಮತ್ತು ಖಾಸಗಿ ಮಕ್ಕಳ ತಜ್ಞ ವೈದ್ಯರ ಜೊತೆ ವಿಡಿಯೋ ಸಂವಾದದ ಮೂಲಕ ಇಂದು ಚರ್ಚಿಸಿದರು ಹಾಗೂ ಮಕ್ಕಳಿಗೆ ಬೇಕಾದ ಸೂಕ್ತ ವೆಂಟಿಲೇಟರಗಳು, ಆಕ್ಸಿಜನ್ ಸೌಲಭ್ಯ, ಮತ್ತು ಅಂಬುಲೆನ್ಸ್ ಸೇರಿದಂತೆ ಮಕ್ಕಳ ಚಿಕಿತ್ಸೆಗಾಗಿಯೇ ಇರುವ ಉಪಕರಣಗಳೊಂದಿಗೆ ಸಿದ್ದತೆಯಲ್ಲಿರಲು ಸೂಚಿಸಲಾಗಿದೆ ಎಂದರು.
ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್ದಲ್ಲಿ ಐಸೋಲೇಶನ್ ಸೆಂಟರ್ ನಿರ್ಮಾಣ ಮಾಡುವ ನಿರ್ಧಾರವನ್ನು ತೇಗೆದುಕೊಳ್ಳಲಾಗಿದೆ. ಅಂಕೋಲಾ, ಕುಮಟಾ, ಭಟ್ಕಳ, ಶಿರಶಿ, ಯಲ್ಲಾಪುರ ದಾಂಡೇಲಿ ಸೇರಿ ಪ್ರತಿ ಕ್ಷೇತ್ರಕ್ಕೆ ವಿಶೇಷ 25 ಬೆಡ್ಗಳ ಮಕ್ಕಳ ವಾರ್ಡಗಳನ್ನು ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಅದೇ ರೀತಿ ಕಾರವಾರದಲ್ಲೊಂದು ಎಮ್ ಆರ್ ಐ ಸೆಂಟರ್ ಅವಶ್ಯಕತೆ ಇರುತ್ತದೆ. ಈ ಎಮ್ ಆರ್ ಐ ಸೆಂಟರ್ ಇಲ್ಲದೇ ಹೋದಾಗ ಬ್ಲ್ಯಾಕ್ ಫಂಗಸ್ ಕಂಡು ಹಿಡಿಯಲು ಸಾಧ್ಯವಾಗುವದಿಲ್ಲ . ಜಿಲ್ಲೆಯಲ್ಲಿ 5 ಜನರಿಗೆ ಬ್ಲ್ಯಾಕ್ ಫಂಗಸ್ ಆಗಿರುವ, ಇದರಲ್ಲಿ ಒಬ್ಬರು ಇದರಿಂದ ಮರಣ ಹೊಂದದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಫಂಗಸ್ ಕಂಡು ಹಿಡಿಯುವ ಎಮ್ ಆರ್ ಐ ಸೆಂಟರ್ ಕುರಿತು ಸರಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 87 ವೈದ್ಯಾಧಿಕಾರಿಗಳ ಹುದ್ದೆಗಳಿದ್ದು, ಸರಕಾರ ಇಂದು 56 ವೈದ್ಯಾಧಿಕಾರಿಗಳನ್ನು ನೇಮಿಸಿರುವುದು ಐತಿಹಾಸಿಕ ಬೆಳವಣಿಗೆ. ಇದು ಮೂರು ದಶಕಲ್ಲೇ ಮೊದಲ ಬಾರಿ ಕಂಡು ಬಂದಂತ್ತಾಗಿದ್ದು, ಜಿಲ್ಲೆಗೆ ಸಂಜೀವಿನಿ ದೊರೆತಂತಾಗಿದೆ ಎಂದರು.
ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ 46% ನಿಂದ 20% ಕ್ಕೆ ಇಳಿಮುಖವಾಗಿದೆ. ಜಿಲ್ಲಾಡಳಿತ ಕೋವಿಡ್-19 ಹಾಗೂ ತೌಕ್ತೆಯಂತಹ ವಿಪತ್ತು ನಿರ್ವಹಣೆಯನ್ನು ಸಮಗ್ರವಾಗಿ ನಿಭಾಯಿಸಿರುತ್ತದೆ, ಲಾಕ್ ಡೌನ್ ಸಮಯದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಅನೇಕ ವ್ಯಾಪಾರಸ್ತರು ಹಾಗೂ ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿರುವುದು ಗಮನದಲ್ಲಿದೆ. ಆದರೆ ಸಾರ್ವಜನಿಕರ ಆರೋಗ್ಯ ಹಾಗೂ ಅನೇಕ ಕುಟುಂಬಗಳ, ಮಕ್ಕಳ ಆರೋಗ್ಯ ದೃಷ್ಠಿಯಿಂದ ಈ ಕ್ರಮವನ್ನು ಕೈಗೊಂಡಿದ್ದು, ಎಲ್ಲರೂ ಸಹಾರ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ. ಪಿ ಮೋಹನರಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ. ಅಪರ ಜಿಲ್ಲಾಧಿಕಾರಿ ಹೆಚ್. ಕೆ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ವಿದ್ಯಾಶ್ರಿ ಚಂದರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದ್ ನಾಯಕ ಇತರರು ಉಪಸ್ಥಿತರಿದ್ದರು.