ಬಿಜೆಪಿ ಸರಕಾರದ ಹಿಂದೀಕರಣದ ವಿರುದ್ಧ ಹೋರಾಟ: ಅಥಾವುಲ್ಲಾ ಜೋಕಟ್ಟೆ

 ಬಿಜೆಪಿ ಸರಕಾರದ ಹಿಂದೀಕರಣದ ವಿರುದ್ಧ ಹೋರಾಟ: ಅಥಾವುಲ್ಲಾ ಜೋಕಟ್ಟೆ
Share this post

ಎಂ.ಆರ್.ಪಿ.ಎಲ್. ಸಂಸ್ಥೆಯ ಹೊಸ ಹುದ್ದೆಗಳ ನೇಮಕಾತಿ ಕೂಡಲೇ ತಡೆಹಿಡಿದು ಸ್ಥಳೀಯರನ್ನು ನೇಮಿಸಬೇಕು

ಮಂಗಳೂರು, ಮೇ 23, 2021: ಓ.ಎನ್.ಜಿ. ಸಿ ಒಡೆತನದ ಎಂ.ಆರ್.ಪಿ.ಎಲ್. ಸಂಸ್ಥೆಯಲ್ಲಿ ಇತ್ತೀಚೆಗೆ ಹೊಸ ಹುದ್ದೆಗಳ ನೇಮಕಾತಿ ಮಾಡುವಾಗ ಹೊರ ರಾಜ್ಯದವರಿಗೆ ಹೆಚ್ಚಿನ ಆದ್ಯತೆ ನೀಡಿದ್ದನ್ನು ಎಸ್. ಡಿ. ಪಿ.ಐ ತೀವ್ರವಾಗಿ ಖಂಡಿಸಿದೆ.

“ಎಂ.ಆರ್.ಪಿ.ಎಲ್ ನ 184 ಹೊಸ ಹುದ್ದೆಗಳ ನೇಮಕಾತಿಯಲ್ಲಿ 172 ಹುದ್ದೆಗಳನ್ನು ಹೊರ ರಾಜ್ಯವಾದ ಉತ್ತರ ಭಾರತೀಯರಿಗೆ ನೀಡುವ ಮೂಲಕ ಸಂಸ್ಥೆ ಹಾಗೂ ಸರಕಾರ ಕನ್ನಡಿಗರಿಗೆ ಅವಮಾನ ಹಾಗೂ ಘೋರವಾದ ಅನ್ಯಾಯ ಮಾಡಿದೆ . ಎಂ.ಆರ್.ಪಿ.ಎಲ್ ಪ್ರಾರಂಭಗೊಂಡ ಹಾಗೂ ವಿಸ್ತರಣೆಗೊಂಡ ಸಂದರ್ಭದಲ್ಲಿ ಸ್ಥಳೀಯರ ವಿರೋಧದ ನಡುವೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿದಾಗ ಸ್ಥಳೀಯರಿಗೆ ಉದ್ಯೋಗದ ಭರವಸೆಯನ್ನು ಕಂಪನಿ ಹಾಗೂ ಸರಕಾರ ನೀಡಿತ್ತು. ಆದರೆ ಭೂಮಿ ಕಳೆದುಕೊಂಡವರು ಹದಿನೈದು ವರ್ಷ ಕಳೆದರೂ ಉದ್ಯೋಗಕ್ಕಾಗಿ ಕಛೇರಿಯಿಂದ ಕಛೇರಿಗೆ ಅಲೆದಾಡುತ್ತಿದ್ದಾರೆ,” ಎಂದು ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾವಳಿಯ ಜನರಿಗೆ ಇದ್ದ ನೌಕರಿಯನ್ನೂ ಕಂಪನಿ ಕಿತ್ತುಕೊಂಡು ಎಲ್ಲಾ ನೇಮಕಾತಿಗಳ ಸಂದರ್ಭದಲ್ಲೂ ಪರರಾಜ್ಯದವರನ್ನು ನೇಮಿಸುವ ಮೂಲಕ ಕಂಪನಿ ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದೆ. ಇದನ್ನು ಪಕ್ಷ ಕಟುವಾಗಿ ಖಂಡಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ರಲ್ಲಿ 12 ಮಂದಿ ಶಾಸಕರು ಹಾಗೂ ಇಬ್ಬರು ಸಂಸದರು ಬಿಜೆಪಿಯವರು. ಜಿಲ್ಲೆಯ ಜನತೆಗೆ ಅನ್ಯಾಯ ಆದಾಗ ಇವರೇನು ಮಾಡುತಿದ್ದಾರೆ ? ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ಕೊಡಲು, ಕೋಮು ಪ್ರಚೋದನಕಾರಿ ಭಾಷಣಕ್ಕಷ್ಟೇ ಅವರು ಸೀಮಿತವೇ? ಎಂದು ಅಥಾವುಲ್ಲಾ ಪ್ರಶ್ನಿಸಿದ್ದಾರೆ.

ಸಂಸದರಿಗೆ ಹಾಗೂ ಶಾಸಕರಿಗೆ ಚುನಾಯಿಸಿದ ಜನತೆಯ ಋಣ ಇದ್ದರೆ ಕೂಡಲೇ ಈ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಳೀಯ ಸಂತ್ರಸ್ಥರನ್ನು ಹಾಗೂ ವಿದ್ಯಾವಂಥ ಕನ್ನಡಿಗರನ್ನು ನೇಮಕ ಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಬಿಜೆಪಿ ಸಂಸದರ ಮನೆಮುಂದೆ ಧರಣಿ ಹಾಗೂ ಕರಿಪತಾಕೆ ಪ್ರದರ್ಶಿಸುವ ಮೂಲಕ ಹೋರಾಟ ಮುಂದುವರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ 28 ರಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದರೂ ಕಳೆದ ಏಳು ವರ್ಷಗಳಿಂದ ಕರ್ನಾಟಕದ ಜನತೆಗೆ ಎಲ್ಲಾ ವಿಧದಲ್ಲೂ ಅನ್ಯಾಯ ವಾಗುತ್ತಿದೆ, ಬ್ಯಾಂಕಿಂಗ್, ರೈಲ್ವೆ, ಅಂಚೆ, ವಿಮೆ, ರಕ್ಷಣಾ ಇಲಾಖೆ ಸೇರಿದಂತೆ ಬಹುತೇಕ ಸರಕಾರಿ ಒಡೆತನದ ಸಂಸ್ಥೆಗಳ ಹುದ್ದೆಗಳು ಉತ್ತರ ಭಾರತೀಯರ ಪಾಲಾಗುತ್ತಿದೆ. ಈ ಮೂಲಕ ಕೇಂದ್ರ ಸರಕಾರವು ಕರ್ನಾಟಕವನ್ನು ಹಿಂದೀಕರಣದ ಮಾಡಲು ಹೊರಟಿದೆ. ಇಷ್ಟಾಗಿಯೂ ನಮ್ಮ ಸಂಸದರು ತುಟಿ ಬಿಚ್ಚುತ್ತಿಲ್ಲ ಇದು ಮೋದಿ, ಅಮಿತ್ ಶಾ ಅವರ ಭಯದಿಂದ ಇರಬಹುದು. ಇಂತಹ ಗುಲಾಮಗಿರಿಯ ರಾಜಕೀಯ ಜೀವನ ಮಾಡುದಕ್ಕಿಂತ ಸ್ವಾಭಿಮಾನದಿಂದ ರಾಜಕೀಯ ನಿವೃತ್ತಿ ಪಡೆದು ಮನೆಯಲ್ಲಿ ಕುಳಿತುಕೊಳ್ಳುವುದು ಉತ್ತಮ ಎಂದು ಬಿಜೆಪಿ ಸಂಸದರ ವಿರುದ್ಧ ಆಥಾವುಲ್ಲಾ ಜೋಕಟ್ಟೆ ಕಿಡಿಕಾರಿದ್ದಾರೆ .

Subscribe to our newsletter!

Other related posts

error: Content is protected !!