ಕನ್ನಡದೊಂದಿಗೆ ತುಳುವಿಗೂ ಸ್ಥಾನ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್
ತುಳು ಭಾಷೆ ಬೆಳವಣಿಗೆಗೆ ಸಂಪೂರ್ಣ ಸಹಕಾರ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ, ಏಪ್ರಿಲ್ 18, 2021: ಪ್ರಾದೇಶಿಕ ಭಾಷೆಗಳ ಬೆಳವಣಿಗೆಯು ಈ ಮಣ್ಣಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸಲು ಪೂರಕವಾಗಬಲ್ಲದು. ಸಾವಿರಾರು ವರ್ಷಗಳ ಇತಿಹಾಸವಿರುವ, ಪಂಚದ್ರಾವಿಡಭಾಷೆಗಳಲ್ಲೇ ಅತ್ಯಂತ ಶ್ರೇಷ್ಠಭಾಷೆಯೆಂದು ಪರಿಗಣಿಸಲ್ಪಟ್ಟಿರುವ ತುಳು ಭಾಷೆಯ ಬೆಳವಣಿಗೆಗೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಆಕಾಶರಾಜ್ ಜೈನ್ ಜಿಲ್ಲಾಧಿಕಾರಿ ಜಿ ಜಗದೀಶ್ ರವರಿಗೆ ತುಳುಲಿಪಿ ಹೊಂದಿರುವ ನಾಮಫಲಕವನ್ನು ನೀಡಿದರು.
Also read: Tulu script name board in Kateel temple
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಉಮೇಶ್ ಆಚಾರ್ಯ ಉಡುಪಿ ಜಿಲ್ಲೆಯಲ್ಲಿ ಕನ್ನಡ ನಾಮಫಲಕದ ಜೊತೆಗೆ ತುಳುಲಿಪಿಯ ನಾಮಫಲಕ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ ತುಳುವರಿಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಬೇಕು ಮತ್ತು ಉಡುಪಿ ಜಿಲ್ಲೆಯಲ್ಲಿ ತುಳುಭಾಷೆಗೆ ಮಾನ್ಯತೆ ಕೊಡಬೇಕು ಎಂದು ಜೈ ತುಳುನಾಡ್(ರಿ) ಸಂಘಟನೆಯ ಪರವಾಗಿ ತುಳು ಲಿಪಿ ಶಿಕ್ಷಕಿಯಾದ ಅಕ್ಷತಾ ಕುಲಾಲ್ ಮನವಿ ಸಲ್ಲಿಸಿದರು.
ಜೈ ತುಳುನಾಡ್(ರಿ) ಸಂಘಟನೆಯ ತುಳುಲಿಪಿ ಮೇಲ್ವಿಚಾರಕರಾದ ಶರತ್ ಕೊಡವೂರು ತುಳು ಲಿಪಿ ಕಲಿಕಾ ತರಬೇತಿಯ ಬಗ್ಗೆ ಮತ್ತು ಆನ್ಲೈನ್ ನಲ್ಲಿ ‘ಬಲೆ ತುಳು ಲಿಪಿ ಕಲ್ಪುಗ’ ಕಾರ್ಯಾಗಾರದಿಂದ ಸುಮಾರು 8000ಕ್ಕೂ ಅಧಿಕ ತುಳುವರು ತುಳು ಲಿಪಿ ಕಲಿತಿರುವ ಬಗ್ಗೆ ಮಾಹಿತಿ ನೀಡಿದರು.
Also read: Udupi: Single day mask fine collection crosses ₹ 93,000
ಹಳೆ ವಿದ್ಯಾರ್ಥಿ ಸಂಘ , ಕೊಡವೂರು ಅಧ್ಯಕ್ಷರಾದ ಸತೀಶ್ ಕೊಡವೂರು ತುಳು ಲಿಪಿ ಕಲಿತ ಕಾರ್ಯಗಾರದಲ್ಲಿ ತುಳುವರ ಉತ್ತಮ ಸ್ಪಂದನೆ ಇರುವುದಾಗಿ ತಿಳಿಸಿದರು.
ತುಳುಕೂಟ ಉಡುಪಿ (ರಿ) ಕಾರ್ಯದರ್ಶಿ, ಗಂಗಾಧರ್ ಕಿದಿಯೂರು, ತುಳುಕೂಟ ಉಡುಪಿ ಯ ಸ್ಥಾಪಕ ಸದಸ್ಯ ಯು.ಜಿ. ದೇವಾಡಿಗ ಇವರು ತುಳುಕೂಟ ಉಡುಪಿ (ರಿ) ನ ಪರವಾಗಿ ಮನವಿಯನ್ನು ಸಲ್ಲಿಸಿದರು. ಗಂಗಾಧರ ಕಿದಿಯೂರು ತಾವು ಬರೆದು ತುಳುಲಿಪಿಯಲ್ಲೇ ಪ್ರಕಟಿಸಿದ “ಪಿಂಗಾರದ ಬಾಲೆ ಸಿರಿ” ಪುಸ್ತಕವನ್ನು ಜಿಲ್ಲಾಧಿಕಾರಿಗಳಿಗೆ ಗೌರವ ಪ್ರತಿಯಾಗಿ ನೀಡಿದರು.
ಈ ಸಂದರ್ಭದಲ್ಲಿ ಜೈ ತುಳುನಾಡ್(ರಿ) ತುಳು ಲಿಪಿ ಶಿಕ್ಷಕರಾದ ಕಿನ್ನು ಭಂಡಾರಿ ಮತ್ತು ಸ್ವಾತಿ ಸುವರ್ಣ ಉಪಸ್ಥಿತರಿದ್ದರು.