ಕೃಷ್ಣಲೀಲೋತ್ಸವದ ಮಾದರಿಯಲ್ಲಿ ರಾಮಲೀಲೋತ್ಸವ ವ್ಯಾಪಕವಾಗಿ ನಡೆಯಲಿ : ಪೇಜಾವರ ಶ್ರೀ ಕರೆ
ಉಡುಪಿ, ಮಾರ್ಚ್ 09, 2021: ಕೃಷ್ಣಲೀಲೋತ್ಸವದ ಮಾದರಿಯಲ್ಲಿ ನಾಡಿನಾದ್ಯಂತ ರಾಮತ್ವದ ಜಾಗೃತಿ, ಸ್ಮರಣೆಗಾಗಿ ರಾಮಲೀಲೋತ್ಸವ ವ್ಯಾಪಕವಾಗಿ ನಡೆಯಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಕೃಷಾಷ್ಟಮಿಯ ಸಂದರ್ಭದಲ್ಲಿ ಎಲ್ಲೆಡೆ ಅತ್ಯಂತ ಸಂಭ್ರಮದ ಕೃಷ್ಣ ಲೀಲೋತ್ಸವ ಮುದ್ದುಕೃಷ್ಣ ಸ್ಪರ್ಧೆ , ಕೃಷ್ಣ ಸಂದೇಶಗಳ ರಸಪ್ರಶ್ನೆ , ಪ್ರವಚನ ಸಪ್ತಾಹಗಳೇ ಮೊದಲಾಗಿ ಕೃಷ್ಣ ಸಂದೇಶಗಳ ಜಾಗೃತಿಗಾಗಿ ಉತ್ಸವಗಳು ನಡೆಯುತ್ತವೆ. ಪ್ರಸ್ತುತ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆ ಮತ್ತು ಆ ಸಂಬಂಧ ನಿಧಿ ಸಂಗ್ರಹ ಅಭಿಯಾನಕ್ಕೂ ದೇಶಾದ್ಯಂತ ಅತ್ಯಂತ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತ ವಾಗಿದೆ . ಇನ್ನೇನು ಮುಂಬರುವ ಚೈತ್ರಮಾಸದಲ್ಲಿ ( ಎಪ್ರಿಲ್) ರಾಮನವಮೀ ಸಮೀಪಿಸುತ್ತಿದೆ . ಈ ಸದವಸರದಲ್ಲಿ ಕೃಷ್ಣಲೀಲೋತ್ಸವದ ಮಾದರಿಯಲ್ಲಿ ನಾಡಿನಾದ್ಯಂತ ರಾಮತ್ವದ ಜಾಗೃತಿ , ಸ್ಮರಣೆಗಾಗಿ ರಾಮಲೀಲೋತ್ಸವಗಳು ವ್ಯಾಪಕವಾಗಿ ನಡೆಯಬೇಕು ಎಂದು ಹೇಳಿದರು.
ವಿವಿಧ ವಯೋಮಾನದ ಮಕ್ಕಳಿಗೆ ರಾಮಾಯಣದ ಪಾತ್ರಗಳ ಛದ್ಮ ವೇಷ , ರಸಪ್ರಶ್ನೆ , ಆಶುಭಾಷಣ , ಪ್ರಬಂಧ , ಚಿತ್ರಕಲೆ ಮೊದಲಸದ ಸ್ಪರ್ಧೆಗಳು , ಸಾಮೂಹಿಕ ಭಜನೆ , ಸಂಗೀತ ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ , ರಾಮಾಯಣ ಕುರಿತಾಗಿ ಚಿಂತನೆ ಉಪನ್ಯಾಸ ಪ್ರವಚನ ಇತ್ಯಾದಿಗಳು ಎಪ್ರಿಲ್ 13 ರಿಂದ 21 ರ ನಡುವಿನ ಅವಧಿಯಲ್ಲಿ ನಡೆಯಬೇಕು. ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳು ಭಜನಾ ಸಂಘಗಳು , ಸಾಂಸ್ಕೃತಿಕ ಸಂಸ್ಥೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಆಯೋಜಿಸಬೇಕು ಎಂದು ಪೇಜಾವರ ಶ್ರೀ ಕರೆ ನೀಡಿದರು.
ಈ ಸಂಬಂಧ ಮೂಡಬಿದಿರೆಯ ನೂತನ ಕನ್ನಡ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶ್ರೀಗಳು ಮಾರ್ಗದರ್ಶನ ನೀಡಿದರು .
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ ಎಮ್ ಮೋಹನ ಆಳ್ವರು ಸಭೆಯನ್ನು ಆಯೋಜಿಸಿದ್ದು ತಮ್ಮ ಅನುಭವದ ನೆಲೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು .
ಸಾಂಸ್ಕೃತಿಕ ಮುಖಂಡರುಗಳಾದ ಹರಿಕೃಷ್ಣ ಪುನರೂರು , ಪ್ರದೀಪ್ ಕಲ್ಕೂರ್ , ಬಾಹುಬಲಿ ಪ್ರಸಾದ್ , ಭುವನಾಭಿರಾಮ ಉಡುಪ ಮೊದಲಾದವರು ಭಾಗವಹಿಸಿ ಅನೇಕ ವಿಷಯಗಳನ್ನು ವಿಶದವಾಹಿ ಚರ್ಚಿಸಿದರು . ರಾಷ್ಟ್ರೀಯ ಸ್ವಯಮ್ ಸೇವಕ ಸಂಘ , ವಿಶ್ವಹಿಂದು ಪರಿಷತ್ ಮೊದಲಸದ ಹಿಂದೂ ಸಂಘಟನೆಗಳನ್ನು ಈ ಉತ್ಸವದ ಬಗ್ಗೆ ಸಂಯೋಜಿಸಿಕೊಂಡ ನಾಡಿನಾದ್ಯಂತ ಈ ಉತ್ಸವ ಅತ್ಯಂತ ಯಶಸ್ವಿಯಾಗುತ್ತದೆ ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು