ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಾಣ: ಅಯೋಧ್ಯೆ ಟ್ರಸ್ಟ್ ನಿರ್ಣಯ

 ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಾಣ: ಅಯೋಧ್ಯೆ ಟ್ರಸ್ಟ್ ನಿರ್ಣಯ
Share this post

ಉಡುಪಿ, ಸೆ 11, 2022: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಂಮದಿರದಲ್ಲಿ  ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದೆಂದು ಭಾನುವಾರ ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ .

ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಜೀ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿಗಳಾದ ಚಂಪತ್ ರಾಯ್ , ಕೋಶಾಧಿಕಾರಿ ಗೋವಿಂದ ಗಿರಿ ಸ್ವಾಮೀಜಿ , ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮೊದಲಾದವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ‌

ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ  ಸುಮಾರು 400 ಕೋಟಿ ವೆಚ್ಚ  ತಗಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1300 ಕೋಟಿ ತಗಲಬಹುದೆಂದು ಅಂದಾಜಿಸಲಾಗಿದೆ. ಮಂದಿರಕ್ಕಾಗಿ ದೇಶಾದ್ಯಂತ ಭಕ್ತರು ನೀಡುತ್ತಿರುವ ದೇಣಿಗೆಯೂ ಭರಪೂರ ಹರಿದು ಬರುತ್ತಿದೆ.‌ ಆದ್ದರಿಂದ ಈ ತನಕದ ಸುಮಾರು 300 ಕೋಟಿ ಖರ್ಚನ್ನು ಈಗ ಹರಿದು ಬರುತ್ತಿರುವ ಹೆಚ್ಚುವರಿ ದೇಣಿಗೆಯಿಂದಲೇ ನಿರ್ವಹಿಸಲಾಗಿದೆ ಎಂದೂ ಸಭೆಗೆ ತಿಳಿಸಲಾಯಿತು.

ಮಂದಿರಕ್ಕೆ ಬೇಕಾಗುಗ ಸಾಗುವಾನಿ ಮರವನ್ನು ಮಹಾರಾಷ್ಟ್ರ ದಿಂದ ತರಿಸಿಕೊಳ್ಳಲಾಗುವುದು.

ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕೆನ್ನುವ ನಾಡಿನ ಅಸಂಖ್ಯ ಭಕ್ತರ  ಇಂಗಿತವನ್ನು  ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಭೆಯಲ್ಲಿ ಮಂಡಿಸಿದರು.

ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರವನ್ನು ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ ವಿಶ್ಚ ಹಿಂದು ಪರಿಷತ್ ನೇತೃತ್ವದಲ್ಲಿ ಕರ್ನಾಟಕದ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಿ ಅಯೋಧ್ಯೆಗೆ ತಲುಪಿಸುವ ಇರಾದೆಯನ್ನು ಭಕ್ತರು ಹೊಂದಿರುವುದನ್ನು ಶ್ರೀಗಳು ತಿಳಿಸಿದರು .

ಅದರ ಜೊತೆಗೆ ಮುಂದಿನ ವರ್ಷಾಂತ್ಯಕ್ಕೆ ನಡೆಯುವ ನೂತನ ಮಂದಿರ ಸಮರ್ಪಣೆ ಹಾಗೂ ಶ್ರೀರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ದಿನಾಂಕ ನಿಗದಿ ಪಡಿಸಿದ ಬಳಿಕ  ದೇಶದ ಭಕ್ತರನ್ನು ಈ ಉತ್ಸವಕ್ಕೆ  ಆಹ್ವಾನಿಸುವ ಸಲುವಾಗಿಯೂ ಒಂದು ಯಾತ್ರೆಯನ್ನು ಕೈಗೊಳ್ಳಬಹುದೆಂಬ ಅಬಿಪ್ರಾಯವನ್ನೂ  ಶ್ರೀಗಳು ವ್ಯಕ್ತಪಡಿಸಿದರು .

ಸಭೆಯಲ್ಲಿ ಉಪಸ್ಥಿತಿ: ಟ್ರಸ್ಟ್ ಅಧ್ಯಕ್ಷ ಮಹಾಂತ ಗೋಪಾಲ್ ದಾಸ್, ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಮಹಾರಾಜ್, ಸದಸ್ಯರುಗಳಾದ ಪೇಜಾವರ ಶ್ರೀ ಹಾಗೂ ಇತರೆ ವಿಶ್ವಸ್ಥರು ,ಗೋರಖಪುರ ಜಿಲಾಧಿಕಾರಿ , ವಿಹುಂಪ ಮುಖಂಡ ಗೋಪಾಲ್ ಜಿ , ಮಂದಿರ ನಿರ್ಮಾಣದ ಇಂಜಿನಿಯರ್ , ವಾಸ್ತು ತಜ್ಞರು ,ಉಪಸ್ಥಿತರಿದ್ದರು. ಮತ್ತೋರ್ವ ವಿಶ್ವಸ್ಥರಾದ ಹಿರಿಯ ನ್ಯಾಯವಾದಿ ಪರಾಶರನ್ ಆನ್ ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

ಹೈದ್ರಾಬಾದ್ ನಲ್ಲಿ ನಡೆಸಿದ ತಮ್ಮ 35 ಚಾತುರ್ಮಾಸ್ಯ ವ್ರತವನ್ನು ಮುಗಿಸಿ ಸೀಮೋಲ್ಲಂಘನವೋ ಎಂಬಂತೆ ಭಾನುವಾರ ಬೆಳಿಗ್ಗೆ ಅಯೋಧ್ಯೆ ತಲುಪಿದ ಪೇಜಾವರ ಶ್ರೀಗಳು ಬೆಳಿಗ್ಗೆ ಶ್ರೀರಾಮನ ತಾತ್ಕಾಲಿಕ ಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದು ಪೂಜೆ ಸಲ್ಲಿಸಿದರು .

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!