ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡ್ ವಿತರಣೆ ಕಡ್ಡಾಯ: ಡಾ. ರಾಜೇಂದ್ರ ಕೆ.ವಿ

 ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡ್ ವಿತರಣೆ ಕಡ್ಡಾಯ: ಡಾ. ರಾಜೇಂದ್ರ ಕೆ.ವಿ
Share this post

ಮಂಗಳೂರು, ಮಾರ್ಚ್ 09, 2021:  ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಗರ್ಭಿಣಿಮಹಿಳೆಯರಿಗೆ ತಾಯಿ ಕಾರ್ಡ್ ವಿತರಣೆ ಮಾಡುವುದು ಕಡ್ಡಾಯವಾಗಬೇಕು, ಇದರಿಂದ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡುವುದನ್ನು ಕಡಿಮೆ ಮಾಡಬಹುದಾಗಿದೆ.

2012 ರ ಜನಗಣತಿ ಆಧಾರದಲ್ಲಿ ಜಿಲ್ಲೆಯು 0-6 ಮಕ್ಕಳ ಲಿಂಗಾನುಪಾತ (ಸಿ.ಎಸ್.ಆರ್) ವಿವರದಂತೆ ರೆಡ್ ಜೋನ್‍ನಲ್ಲಿ ಇದೆ. 2020ನೇ ಸಾಲಿನ ಏಪ್ರಿಲ್ ನಿಂದ 2021ನೇ ಸಾಲಿನ ಜನವರಿ ಮಾಹೆಯ ವರೆಗೆ 11,463 ಗಂಡು ಮಕ್ಕಳು ಹಾಗೂ 10,993 ಹೆಣ್ಣು ಮಕ್ಕಳ ಜನನವಾಗಿದೆ.

ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಅಸಮತೋಲನ ಉಂಟಾಗುವುದನ್ನು ತಡೆಗಟ್ಟಬೇಕು.

ಕಾನೂನು ಉಲ್ಲಂಘಿಸಿದವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಲಾಗುವುದು ಎಂದ ಅವರು, ಯಾವುದೇ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಇಂತಹ ಪ್ರಕರಣಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಅಂತಹ ಸೆಂಟರ್ ಗಳ ಪರವಾನಿಗೆಯನ್ನು ಯಾವುದೇ ಸೂಚನೆ ನೀಡದೇ ರದ್ದುಪಡಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಒಪಿಡಿಯಲ್ಲಿ, ಡೆಲಿವರಿ ಕೇಸ್‍ಗಳು ಬಂದಿವೆ ಎಂಬುದನ್ನು ಸಂಗ್ರಹಣೆ ಮಾಡಬೇಕು. ತಾಯಿ ಕಾರ್ಡ್ ಇಲ್ಲದವರ ಹೆರಿಗೆಯಾದ ಸಂದರ್ಭದಲ್ಲಿ ಅವರನ್ನು ತಪಾಸಣೆ ಮಾಡಿದ ವೈದ್ಯರು ಹಾಗೂ ಹೆರಿಗೆಯಾದ ಮಹಿಳೆಯ ಹೆಸರು, ಊರು ಇನ್ನಿತರ ವಿಳಾಸದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಬೇಕು ಹಾಗೂ ಬಾಲಿಕಾ ಸಾಫ್ಟ್ ವೆರ್ ನಲ್ಲಿ ಗರ್ಭಿಣಿ ಮಹಿಳೆಯರ ನೋಂದಣಿ ಯಾಗುವುದರಿಂದ ಆಶಾ ಕಾರ್ಯಕರ್ತೆಯರಿಗೆ ಅವರ ಬಗ್ಗೆ ಮಾಹಿತಿ ನೀಡಲು ಹಾಗೂ ತಾಯಿ ಕಾರ್ಡ್ ವಿತರಿಸಲು ಅನುಕೂಲವಾಗುವುದು ಎಂದು ಹೇಳಿದರು.

ಅಧಿಕಾರಿಗಳು ವಿಶೇಷ ತಂಡಗಳನ್ನು ರಚನೆ ಮಾಡಿ, ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಅನಿರೀಕ್ಷಿತ ಬೇಟಿಗಳನ್ನು ಆಗಿಂದಾಗ್ಗೆ ಮಾಡುವುದರೊಂದಿಗೆ ಅಕ್ರಮಗಳನ್ನು ಪತ್ತೆ ಹಚ್ಚಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯಾರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 174 ಸ್ಕ್ಯಾನಿಂಗ್ ಸೆಂಟರ್ ಗಳು ನೊಂದಣಿಯಾಗಿದ್ದು, ಅವುಗಳಲ್ಲಿ 159 ಕಾರ್ಯನಿರ್ವಹಿಸುತಿದ್ದು, 15 ಸೆಂಟರ್ ಗಳು ಬೇರೆ ಬೇರೆ ಕಾರಣಗಳಿಂದ ಸ್ಕ್ಯಾನಿಂಗ್ ಕಾರ್ಯ ನಡೆಸುತ್ತಿಲ್ಲ ಎಂದರು.  

ಸಭೆಯಲ್ಲಿ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷೆ ಡಾ. ದೀಪಾ ಪ್ರಭು, ಜಿಲ್ಲಾ ತಪಾಸಣಾ ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ಡಾ.ಅನಿತಾರಾಜ್ ಭಟ್, ಡಾ. ಚಿದಾನಂದ್ ಮೂರ್ತಿ, ಡಾ. ಅಮೃತ ಭಂಡಾರಿ, ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ವತ್ಸಲಾ ಕಾಮತ್, ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾದ ಡಾ. ಶೈಲಜಾ, ಡಾ. ರವಿಚಂದ್ರ, ಶೆರ್ಲಿ. ಟಿ. ಬಾಬು, ವಸಂತ ಪೆರಾಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!