ಕೊರಗ ಜನಾಂಗದ ಸಂಪೂರ್ಣ ಶ್ರೇಯೋಭಿವೃದ್ಧಿಗೆ ಅಗತ್ಯ ಕ್ರಮ: ಡಾ.ರಾಜೇಂದ್ರ ಕೆ.ವಿ

 ಕೊರಗ ಜನಾಂಗದ ಸಂಪೂರ್ಣ ಶ್ರೇಯೋಭಿವೃದ್ಧಿಗೆ ಅಗತ್ಯ ಕ್ರಮ: ಡಾ.ರಾಜೇಂದ್ರ ಕೆ.ವಿ
Share this post

ಮಂಗಳೂರು, ಸೆ.19, 2022: ಜಿಲ್ಲೆಯಲ್ಲಿರುವ ಕೊರಗ ಜನಾಂಗದ ಸಂಪೂರ್ಣ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವಿವಿಧ ಮಜಲುಗಳಲ್ಲಿ ಆಳವಾದ ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೆ.19ರ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೊರಗ ಜನಾಂಗದ ಶ್ರೇಯೋಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಮುದಾಯದ ವಿದ್ಯಾರ್ಥಿಗಳಲ್ಲಿ ಕೆಲವರು ಶಿಕ್ಷಣವನ್ನು ಪೂರ್ಣಗೊಳಿಸದೆ ಇರುವುದು,  ಮಹಿಳೆಯರಲ್ಲಿ ಅಪೌಷ್ಟಿಕತೆ ಹಾಗೂ ರಕ್ತ ಹೀನತೆ, ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ವಿವರವಾದ ಅಧ್ಯಯನ ಮಾಡಬೇಕು, ಅದಕ್ಕೆ ಪೂರಕವಾದ ಪ್ರಶ್ನೋತ್ತರ ಮಾಲಿಕೆಗಳನ್ನು ಸಿದ್ಧಪಡಿಸಿಕೊಂಡು ಅವರು ವಾಸಿಸುವ ಸ್ಥಳಗಳಿಗೆ ತೆರಳಿ, ಅವರಿರುವ ಪ್ರತಿ ಮನೆಯಲ್ಲೂ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಅಧ್ಯಯನದ ಸಂದರ್ಭದಲ್ಲಿ ಪ್ರಮುಖವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳು ಯಾವ ಕಾರಣಕ್ಕಾಗಿ ಶಾಲೆಯಿಂದ ಹೊರಗುಳಿದಿದ್ದಾರೆ, ಸಮುದಾಯದಲ್ಲಿ ಕೆಲವರು ದುಶ್ಚಟಗಳಿಗೆ ಒಳಗಾಗಿದ್ದರೆ ಅವುಗಳಿಗೆ ಕಾರಣ ಹುಡುಕುವ ಸಂಪೂರ್ಣ ವಿವರಗಳನ್ನೊಂಡ ಮಾಹಿತಿ ಸಂಗ್ರಹಿಸಬೇಕು, ಈ ಕಾರ್ಯಕ್ಕಾಗಿ ಜಿಲ್ಲಾ ಖನಿಜ ನಿಧಿಯಿಂದ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗುವುದು, ಜಿಲ್ಲೆಯಲ್ಲಿರುವ ಸಂಪೂರ್ಣ ಕೊರಗ ಕುಟುಂಬಗಳ ಶೈಕ್ಷಣಿಕ, ಆರೋಗ್ಯ, ಅವರ ಅನುವಂಶಿಕತೆಯನ್ನು ಸಂಪೂರ್ಣ ಅಧ್ಯಯನ ಮಾಡಿ ವರದಿ ನೀಡುವಂತೆ ಅವರು ತಿಳಿಸಿದರು.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜಿಲ್ಲೆಯಲ್ಲಿರುವ 9 ವೈದ್ಯಕೀಯ ಕಾಲೇಜುಗಳ ವಿಭಾಗದ ಮುಖ್ಯಸ್ಥರು ಹಾಗೂ ಅವರಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮತ್ತು ಇತರೆ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ಅದಕ್ಕಾಗಿ ರಚಿಸಲಾಗುವುದು, ಈ ಸಮಿತಿಯು ಕೂಲಂಕುಷವಾಗಿ ಅಧ್ಯಯನ ಮಾಡಬೇಕು, ಇದಕ್ಕೆ ಪೂರಕವಾಗಿ ಮೊಬೈಲ್ ಆ್ಯಪ್ ಹಾಗೂ ಕಂಪ್ಯೂಟರ್ ಸಾಪ್ಟ್‍ವೇರ್ ಅಭಿವೃದ್ಧಿಪಡಿಸಿ ನೀಡಲಾಗುವುದು, ಇದರಲ್ಲಿ ಕೊರಗ ಸಮುದಾಯದ ಮಾಹಿತಿಯನ್ನು ಅಪ್‍ಡೆಟ್ ಮಾಡಬೇಕು, ಕಮ್ಯುನಿಟಿ ಮೆಡಿಸಿನ್ ಸ್ಟಾಫ್‍ನವರು ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಶ್ಮಿ, ತಜ್ಞ ವೈದ್ಯರಾದ ಡಾ. ವಿಜಯ್ ಕುಮಾರ್, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಎಂ. ಸುಂದರ್ ಹಾಗೂ ಜಿಲ್ಲಾ ಕೊರಗ ಸಂಘದ ಪದಾಧಿಕರಿಗಳು ಮತ್ತು ಕಮ್ಯುನಿಟಿ ಮೆಡಿಸನ್ ಸ್ಟಾಫ್‍ಗಳು ಭಾಗವಹಿಸಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!