ಅ. 5 ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ಲಭ್ಯ: ಪ್ರಸನ್ನ ಹೆಚ್

 ಅ. 5 ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ಲಭ್ಯ: ಪ್ರಸನ್ನ ಹೆಚ್
Share this post

ಉಡುಪಿ, ಸೆ 19, 2022: ಹೊಸ ಮರಳು ನೀತಿಯಲ್ಲಿ ಸೂಚಿಸಿದಂತೆ , ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳ ಮತ್ತು ಕೆರೆಗಳಲ್ಲಿ ಈಗಾಗಲೇ  ಗುರುತಿಸಿರುವ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳನ್ನು ಅಕ್ಟೋಬರ್ 5 ರಿಂದ ತೆಗೆಯಲು  ಸಂಬಂದಪಟ್ಟ ಗ್ರಾಮ ಪಂಚಾಯತ್ ಗಳಲ್ಲಿ ಎಲ್ಲಾ ಅಗತ್ಯ ಸಿದ್ದತೆಗಳನ್ನು  ಮಾಡಿಕೊಳ್ಳುವಂತೆ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಪ್ರಸನ್ನ ಹೆಚ್. ಹೇಳಿದರು.

ಅವರು ಇಂದು  ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡುವ  ತಂತ್ರಾಂಶ ಬಳಕೆ ಬಗ್ಗೆ  ಪಂಚಾಯತ್ ಗಳ ಅಧ್ಯಕ್ಷರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪಿಡಿಓ ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ  ಮಾತನಾಡಿದರು. 

ಹೊಸ ಮರಳು ನೀತಿ 2020 ಮತ್ತು 2021 ರಂತೆ, ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿಯ ಹಳ್ಳ ಮತ್ತು ತೊರೆಗಳಲ್ಲಿ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಅವಕಾಶ ಕಲ್ಪಿಸಿದ್ದು ,  ಅದರಂತೆ ಜಿಲ್ಲೆಯ ಕಾರ್ಕಳ, ಹೆಬ್ರಿ, ಕಾಪು, ಕುಂದಾಪುರ ಮತ್ತು ಬೈಂದೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ 35 ಮರಳು ನಿಕ್ಷೇಪಗಳಲ್ಲಿ ಒಟ್ಟು 49903 ಮೆ.ಟನ್ ಪ್ರಮಾಣದ ಮರಳನ್ನು ಗುರುತಿಸಲಾಗಿದ್ದು, ಇದನ್ನು ಅಕ್ಟೋಬರ್ 5 ರಿಂದ ತೆರವುಗೊಳಿಸಲು ಸಂಬಂದಪಟ್ಟ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

ಮರಳು ನಿಕ್ಷೇಪಗಳನ್ನು ತೆರವುಗೊಳಿಸಲು ಈಗಾಗಲೇ ಪಂಚಾಯತ್ ಗಳಿಗೆ ಆಶಯ ಪತ್ರಗಳನ್ನು  ನೀಡಲಾಗಿದ್ದು,  ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಹಕರು ಮತ್ತು ಸರ್ಕಾರಿ ಸ್ಥಳೀಯ ಕಾಮಗಾರಿಗಳ ಗುತ್ತಿಗೆದಾರರು , ಸರ್ಕಾರದಿಂದ ನಿಗಧಿಪಡಿಸಿದ ಗರಿಷ್ಠ ಮಾರಾಟದರವನ್ನು  ಗ್ರಾಮ ಪಂಚಾಯತ್ ಗಳಿಗೆ ಪಾವತಿಸಿ , ರವಾನೆ ಪರವಾನಗಿ ಪಡೆದು , ಕಡಿಮೆ ಹೇರು ಭಾರ ಸಾಮಥ್ರ್ಯದ ವಾಹನಗಳಲ್ಲಿ ಮರಳನ್ನು ಸ್ವಂತ ಖರ್ಚಿನಲ್ಲಿ ತುಂಬಿಸಿ ಸಾಗಾಟ ಮಾಡಬಹುದು ಎಂದರು.

ಗ್ರಾಮ ಪಂಚಾಯತ್ ಗಳು  ಗ್ರಾಹಕರಿಂದ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಜಧನ ಹಾಗೂ ಅನ್ವಯವಾಗುವ ಇತರೆ ಶುಲ್ಕಗಳನ್ನು ಸ್ವೀಕರಿಸಿ, ವಿಶೇಷ ರಕ್ಷಣಾತ್ಮಕವುಳ್ಳ ಸಾಗಾಣಿಕೆ ಪರವಾನಗಿಯನ್ನು  ಗ್ರಾಹಕರಿಗೆ ನೀಡಬೇಕು ಈ ಕುರಿತಂತೆ ಅಗತ್ಯವಿರುವ ಎಲ್ಲಾ ರೀತಿಯ ತಾಂತ್ರಿಕ ತರಬೇತಿ ಮತ್ತು ನೆರವÀನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಪಡೆಯುವಂತೆ ತಿಳಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ನಿಕ್ಷೇಪಗಳಲ್ಲಿ ನಿರೀಕ್ಷಿತ ಪ್ರಮಾಣದ ಮರಳು ಇಲ್ಲದೇ ಇರುವ ಬಗ್ಗೆ ಅಥವಾ ಆ ಪ್ರದೇಶದಲ್ಲಿ ಮರಳು ತೆಗೆಯಲು ಅಡೆತಡೆಗಳಿದಲ್ಲಿ ಆಥವಾ ಹೊಸ ಪ್ರದೇಶದಲ್ಲಿ ಮರಳು ಲಭ್ಯವಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ, ಅಗತ್ಯ ಸ್ಥಳ ಬದಲಾವಣೆಯನ್ನು ಮಾಡಿಕೊಳ್ಳಲು ಅವಕಾಶವಿದೆ.  ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಮರಳು ತೆಗೆಯುವಿಕೆ ಮತ್ತು ಸಾಗಾಣಿಕೆ ಕಾರ್ಯವನ್ನು ನಿರ್ವಹಿಸುವಂತೆ  ಹಾಗೂ ಯಾವುದೇ ಸಂದರ್ಭದಲ್ಲೂ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಮರಳು ತೆಗೆಯುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಯಂತ್ರೋಪಕರಣ ಬಳಕೆ ಮಾಡದಂತೆ ಸೂಚನೆ ನೀಡಿದ  ಅವರು, ಪರವಾನಗಿ ಪಡೆದ ಪ್ರಮಾಣಕ್ಕೆ ಅನುಗುಣವಾಗಿ ಮಾತ್ರ ಮರಳು ತೆಗೆದು , ಸಾಗಾಟ ಮಾಡುವ ಬಗ್ಗೆ ಸ್ಥಳದಲ್ಲಿ ಹಾಜರಿದ್ದು ಪರಿಶೀಲಿಸುವಂತೆ ಹಾಗೂ  ಸ್ಥಳೀಯ ನಿರ್ಮಾಣ ಚಟುವಟಿಕೆಗಳಿಗೆ ಮರಳಿನ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.

ಮರಳು ತೆಗೆಯಲು ನಿಗಧಿತ ಶುಲ್ಕ ಸಂಗ್ರಹ , ಸಾಗಾಟ ಪರವಾನಗಿ ನೀಡುವ  ಕುರಿತ ತಂತ್ರಾಂಶ ಬಳಕೆ ಮಾಡುವ ಬಗ್ಗೆ ತರಬೇತಿ ನೀಡಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಹಾಗೂ  ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪಿಡಿಓಗಳು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!