ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 88ನೆ ಅಧೀವೇಶನ
ಬೆಳ್ತಂಗಡಿ ಡಿಸೆಂಬರ್, 14, 2020: ಸಾಹಿತ್ಯ ಸಮಾಜದ ಕನ್ನಡಿಯಂತಿದ್ದು ಸಮಾಜದ ರಕ್ಷಣೆ ಮತ್ತು ಪೋಷಣೆಗೆ ಸಾಹಿತ್ಯ ಅಗತ್ಯ ಎಂದು ಬೆಂಗಳೂರಿನ ಹಿರಿಯ ವಿದ್ವಾಂಸ ಡಾ. ಎಸ್. ರಂಗನಾಥ್ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 88ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯಕ್ಕೆ ಔಷಧೀಯ ಗುಣವೂ ಇದ್ದು ಜೀವನ ಮೌಲ್ಯಗಳ ಆಕರವಾಗಿದೆ. ಸಾಹಿತ್ಯದಲ್ಲಿ ಧರ್ಮ, ಕಲೆ, ಚಿತ್ರಕಲೆ, ಜೀವನ ಸೌಂದರ್ಯ, ವ್ಯಾಕರಣ, ವೈಚಾರಿಕತೆ – ಎಲ್ಲವೂ ಅಡಕವಾಗಿದೆ.
ಕೊರೊನಾದಿಂದ ಮುಕ್ತಿ ಪಡೆಯಲು ಕೂಡಾ ಸಾಹಿತ್ಯ ಪ್ರಮುಖ ಮಾಧ್ಯಮವಾಗಿದೆ,” ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಕಾಲಕ್ಕೆ ತಕ್ಕಂತೆ ಪರಂಪರೆ ಬಗ್ಗೆ ಗೌರವ ಉಳಿಸಿಕೊಂಡು ಆಧುನಿಕತೆಯ ಸ್ಪರ್ಶ ನೀಡಿದಾಗ ಅದು ಹೆಚ್ಚು ಮೌಲ್ಯಯುತವಾಗಿ ವಿಶ್ವಾಸಾರ್ಹತೆಯನ್ನು ಪಡೆಯುತ್ತದೆ. ಧರ್ಮದ ನಡೆ ಸಮಾಜದ ಕಡೆಗೆ ಆಗಬೇಕು ಎಂದು ಹೇಳಿದರು.
ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನ ಪರಂಪರೆಯೊಂದಿಗೆ ಡಿ. ವೀರೇಂದ್ರ ಹೆಗ್ಗಡೆಯವರು ಯುವಜನತೆಯಲ್ಲಿ ಮತ್ತು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಸ್ವಶಕ್ತಿ ದಾನವನ್ನು ಅಳವಡಿಸಿಕೊಂಡು ಕ್ರಾಂತಿಕಾರಿ ಸುಧಾರಣೆ ಮಾಡಿದ್ದಾರೆ. ಧರ್ಮದ ನಡಿಗೆಯನ್ನು ಸಮಾಜದ ಕಡೆಗೆ ತಿರುಗಿಸಿದ್ದಾರೆ. ಇಂದು ಎಲ್ಲಡೆ ಸತ್ಯ ಕಣ್ಮರೆಯಾಗುತ್ತಿದ್ದು ಸುಳ್ಳು ಮತ್ತು ಅವ್ಯವಹಾರಗಳೇ ವಿಜೃಂಭಿಸುತ್ತವೆ. ಆದರೆ ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆ ನಿಂತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶ:
ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಮಾನವ ಜೀವನಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶವಾಗಿದೆ. ಪಂಚಭೂತಗಳು ಹಾಗೂ ನಮ್ಮ ಪಂಚೇಂದ್ರೀಯಗಳು ಮಲಿನವಾಗದಂತೆ ಎಚ್ಚರಿಸುವ ಕಾರ್ಯ ಸಾಹಿತ್ಯದಿಂದಲೇ ಆಗುತ್ತದೆ. ಉತ್ತಮ ಸಾಹಿತ್ಯದ ಅಧ್ಯಯನದಿಂದ ನಮ್ಮ ಬದುಕಿಗೆ ಬೇಕಾದ ಉತ್ತಮ ನೈತಿಕ, ಧಾರ್ಮಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಮೌಲ್ಯಗಳ ಪ್ರೇರಣೆ ದೊರಕುತ್ತದೆ ಎಂದು ಹೇಳಿದರು.
ತನ್ನನ್ನು ತಾನು ಅರಿತು ಬಾಳಬೇಕು ಎಂಬ ದಿವ್ಯ ಸಂದೇಶ ನಮ್ಮ ಜಾನಪದ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ನಮಗೆ ಆಸಕ್ತಿಯ ವಿಷಯದ ಪುಸ್ತಕಗಳನ್ನು ಖರೀದಿಸಿ ಓದಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಕೊರೊನಾ ಸಮಯದಲ್ಲಿ ತಾನು ಅತಿ ಹೆಚ್ಚು ಪುಸ್ತಕಗಳನ್ನು ಸ್ವೀಕರಿಸಿದ್ದೇನೆ ಹಾಗೂ ಓದಿದ್ದೇನೆ ಎಂದು ಅವರು ಹೇಳಿದರು.
ಧರ್ಮಸ್ಥಳದಿಂದ “ಮಂಜುವಾಣಿ” ಮತ್ತು “ನಿರಂತರ” ಎಂಬ ಎರಡು ಮಾಸ ಪತ್ರಿಕೆಗಳನ್ನು ಪ್ರಕಟಿಸಿ ಜ್ಞಾನ ಪ್ರಸಾರ ಮಾಡಲಾಗುತ್ತದೆ.
“ಸುಜ್ಞಾನ ನಿಧಿ” ಯೋಜನೆಯಡಿ 34,897 ವಿದ್ಯಾರ್ಥಿಗಳಿಗೆ 48.91 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ ಎಂದು ಹೆಗ್ಗಡೆಯವರು ತಿಳಿಸಿದರು.
ಮೈಸೂರಿನ ಡಾ. ಜ್ಯೋತಿಶಂಕರ್ “ಪಂಪನ ಆದಿಪುರಾಣದಲ್ಲಿ ಜೀವನ ದೃಷ್ಟಿ” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಮೂಡಬಿದ್ರೆಯ ಡಾ. ಪುಂಡಿಕಾೈ ಗಣಪಯ್ಯ ಭಟ್ “ಲಿಪಿ-ಭಾಷೆ ಮತ್ತು ಸಂಸ್ಕøತಿ” ಬಗ್ಯೆ ಉಪನ್ಯಾಸ ನೀಡಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಮತ್ತು ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಪಿ. ಸಿ. ಹಿರೇಮಠ ಧನ್ಯವಾದ ಸಲ್ಲಿಸಿದರು.
ಫೋಟೋ : ಕೀರ್ತಿ ಮಂಗಳೂರು