ಅಂಚೆ ಇಲಾಖೆಯಿಂದ ವಿವಿಧ ಬ್ಯಾಂಕಿಂಗ್ ಸೇವೆ
ಕಾರವಾರ ಅಗಸ್ಟ್ 28: ಸಾರ್ವಜನಿಕರ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಅವಶ್ಯಕ ಸೇವೆಗಳನ್ನು ಒದಗಿಸಲು ಅಂಚೆ ಇಲಾಖೆಯು ವಿನೂತನ ರೀತಿಯಲ್ಲಿ ಸನ್ನಧ್ಧವಾಗಿದೆ.
ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ ಬ್ಯಾಂಕಿಗೆ ( IPPB) ಪ್ರಧಾನ ಮಂತ್ರಿಯವರು ಚಾಲನೆ ನೀಡಿದ್ದು, ಈಗ ಗ್ರಾಹಕರು ತಮ್ಮ ವಿವಿಧ ಹಣಕಾಸಿನ ವ್ಯವಹಾರಗಳನ್ನು ತಾವಿರುವ ಸ್ಥಳದಿಂದಲೇ ಅಂಚೆ ಇಲಾಖೆಯ ಪೇಮೆಂಟ್ ಬ್ಯಾಂಕಿನ, ಆಧಾರ್ ಸಂಖ್ಯೆಯ ಸಹಾಯದಿಂದ ( Aadhar enabled Payment System ಮಾಡಬಹುದಾಗಿರುತ್ತದೆ.
ಯಾವುದೇ ರಾಷ್ಟ್ರೀಕೃತ ಮತ್ತು ಇತರೇ ಬ್ಯಾಂಕಿನ ವ್ಯವಹಾರಕ್ಕಾಗಿ ಅಂದರೆ ಹಣ ಹಿಂಪಡೆಯುವುದು, ಬ್ಯಾಲೆನ್ಸ್ ವಿಚಾರಣೆ, ಖಾತೆಯ ವ್ಯವಹಾರದ ವಿಚಾರಣೆ ಇವುಗಳನ್ನು ಎಲ್ಲಾ ಅಂಚೆ ಕಛೇರಿ ವಿಶೇಷವಾಗಿ ಗ್ರಾಮೀಣ ಅಂಚೆ ಕಛೇರಿಗಳಲ್ಲಿ ಪೋಸ್ಟ್ ಮ್ಯಾನ್/ ಗ್ರಾಮೀಣ ಅಂಚೆ ಸೇವಕರಿಗೆ ತಿಳಿಸಿದ್ದಲ್ಲಿ ಅವರು ಮನೆ ಮನೆಗೆ ತೆರಳಿ ಹಣವನ್ನು (AePS ) ಮೂಲಕ ಪೂರೈಸುವರು. ಈ ವ್ಯವಹಾರಗಳನ್ನು ನಿರ್ವಹಿಸಲು ಗ್ರಾಹಕರ ಬ್ಯಾಂಕ್ ಖಾತೆಗೆ ಜೋಡಣೆಯಾದ ಆಧಾರ ನಂಬರ್, ಮೊಬೈಲ್ ನಂಬರ್ ಮತ್ತು ಖಾತೆದಾರರ ಬೆರಳಚ್ಚು ನೀಡಬೇಕಾಗುತ್ತದೆ. ಇದರ ಖಚಿತತೆಯನ್ನು ಆಧಾರ ಕಾರ್ಡ್ ಮೂಲಕ ಪ್ರಮಾಣಿಕರಿಸಿ ನಂತರ ಗ್ರಾಹಕರು ಸೂಚಿಸಿದ ನಗದನ್ನು (ದಿನಒಂದಕ್ಕೆ ಗರಿಷ್ಟ ರೂ.10,000/- ವರೆಗೆ) ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಿಂದ ಗ್ರಾಹಕರು, ಅಂಚೆ ಕಛೇರಿ / ತಮ್ಮ ಸ್ಥಳದಲ್ಲಿಯೇ ಹಣವನ್ನು ಹಿಂಪಡೆಯಬಹುದಾಗಿದೆ.
ಸಾರ್ವಜನಿಕರು ಸರ್ಕಾರದ ಯಾವುದೇ ನೇರ ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಬೇಕಾದರೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮುಖಾಂತರ ತಮ್ಮ ಮನೆಯ ಬಾಗಿಲಲ್ಲೆ ಕೇವಲ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಖಾತೆಯನ್ನು ಪೋಸ್ಟ್ ಮ್ಯಾನ್ ಮೂಲಕವೂ ತೆರೆಯಬಹುದಾಗಿದೆ. ಇದಲ್ಲದೇ ಸಾರ್ವಜನಿಕರು ತಮ್ಮ ಊರಿನಲ್ಲಿಯೇ ಕುಳಿತು ಯಾವುದೇ ಬಿಲ್ (ವಿದ್ಯುತ್, ಟೆಲಿಪೋನ್, ಆಖಿಊ ರೀಚಾರ್ಜ) ಪಾವತಿ ಮುಂತಾದವುಗಳನ್ನು ಗ್ರಾಹಕರೆ ಸ್ವತಃ ಮಾಡಿಕೊಳ್ಳಬಹುದಾಗಿದೆ ಇಲ್ಲವಾದಲ್ಲಿ ನಮ್ಮ ಅಂಚೆ ಕಛೇರಿ / ಪೋಸ್ಟ್ ಮ್ಯಾನ್ ಮುಖಾಂತರವೂ ಮಾಡಬಹುದಾಗಿದೆ.
ಸರ್ಕಾರವು ಗ್ರಾಮೀಣ ಜನರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಎಟಿಎಮ್/ಬ್ಯಾಂಕ್ಗಳಿಗೆ ತಿರುಗಾಡದೇ ತಾವು ವಾಸಿಸುವ ಗ್ರಾಮಗಳ ಪೋಸ್ಟ್ ಆಫೀಸ್ / ಪೋಸ್ಟ್ಮನ್ಗೆ ಫೋನ್ ಮುಖಾಂತರ / ಮೌಖಿಕವಾಗಿ ತಿಳಿಸಿ, “AePS” ಸೌಲಭ್ಯವನ್ನು ಪಡೆಯುವ ಮೂಲಕ ಕೊವಿಡ್ -19 ಮುಕ್ತ ಸಮಾಜ ನಿರ್ಮಿಸಲು ಸಹಕರಿಸಬೇಕೆಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರಾದ ಜಿ. ಹರೀಶ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.