ಬಲಾಯಿಪಾದೆಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ

 ಬಲಾಯಿಪಾದೆಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ
Share this post
Service road at Balaipade

ಉಡುಪಿ ಜೂನ್ 22, 2021: ಬಲಾಯಿಪಾದೆ ಜಂಕ್ಷನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿರುವುದರಿಂದ, ಸ್ಥಳೀಯ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಆದಷ್ಟು ಶೀಘ್ರದಲ್ಲಿ ಸರ್ವೀಸ್ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಲಾಯಿಪಾದೆ ಜಂಕ್ಷನ್ ಬಳಿ ಸರ್ವೀಸ್ ರಸ್ತೆ ನಿರ್ಮಾಣದ ಕುರಿತು
ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿಯಿಂದ ಬಲಾಯಿಪಾದೆ ಹಾಗೂ ಉದ್ಯಾವರಕ್ಕೆ ತೆರಳುವ ಮಾರ್ಗದಲ್ಲಿ, ಸರ್ವಿಸ್ ರಸ್ತೆ ಇಲ್ಲದ ಕಾರಣ, ಇಲ್ಲಿ ಹೆಚ್ಚಿನ
ವಾಹನ ದಟ್ಟಣೆ ಉಂಟಾಗುವುದರ ಜೊತೆಗೆ, ವಾಹನ ಸವಾರರು ರಾಂಗ್‌ರೂಟ್ ಮೂಲಕ ರಾಷ್ಟ್ರೀಯ ಹೆದ್ದಾರಿಗೆ
ಸಂಚರಿಸುತ್ತಿದ್ದು, ಇದರಿಂದ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತಗಳು ತಡೆಯುವ
ನಿಟ್ಟಿನಲ್ಲಿ ಈ ಭಾಗದಲ್ಲಿ ಅತೀ ಶೀಘ್ರವಾಗಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ
ಸೂಚಿಸಿದರು.

ಕರಾವಳಿ ಜಂಕ್ಷನ್, ಕಟಪಾಡಿ ಹಾಗೂ ಅಂಬಾಗಿಲು-ಸಂತೆಕಟ್ಟೆ ಜಂಕ್ಷನ್‌ಗಳಲ್ಲಿ ಸಹ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಈ
ಜಂಕ್ಷನ್‌ಗಳಲ್ಲಿ ಅರ್ಧಕ್ಕೆ ನಿಲ್ಲಿಸಿದ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸುವಂತೆ ಎನ್.ಹೆಚ್. ಅಧಿಕಾರಿಗಳಿಗೆ ಸೂಚನೆ
ನೀಡಿದರು.

ಮಳೆಯ ಕಾರಣದಿಂದ ಕುಂದಾಪುರ ಶಾಸ್ತ್ರಿ ಸರ್ಕಲ್, ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜು ಹಾಗೂ ಮಹೇಶ್ ಹಾಸ್ಪಿಟಲ್
ಬಳಿ ಮತ್ತು ಬಾರ್ಕೂರು ಕ್ರಾಸ್‌ಗಳಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿದ ಪರಿಣಾಮವಾಗಿ, ಈ
ಪ್ರದೇಶದಲ್ಲಿ ಅಪಘಾತಗಳು ಸಂಭವಿಸುತ್ತಿರುವುದರಿAದ, ಇಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ
ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆಯಲ್ಲಿ ದಾರಿದೀಪ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ
ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಆದಷ್ಟು ಶೀಘ್ರವಾಗಿ ಈ ದಾರಿದೀಪಗಳನ್ನು ದುರಸ್ಥಿ ಮಾಡುವಂತೆ ಹಾಗೂ
ಅಪೂರ್ಣಗೊಂಡ ಪಡುಬಿದ್ರೆ ಸರ್ವಿಸ್ ರೋಡ್ ಕಾಮಗಾರಿಗಳನ್ನು ತಕ್ಷಣವೇ ಕೈಗೊಂಡು ಈ ತಿಂಗಳ ಅಂತ್ಯದೊಳಗೆ ಕಾಮಗಾರಿ
ಮುಕ್ತಾಯಗೊಳಿಸುವಂತೆ ಎನ್.ಹೆಚ್.ಎ.ಐ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸಬಹುದಾದ ಹೊಸ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ, ಅದರ
ವಿವರಗಳನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಗಳ
ಜಂಟಿ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್‌ಪಿ ಕುಮಾರಚಂದ್ರ, ಕುಂದಾಪುರ ಸಹಾಯಕ ಕಮೀಷನರ್ ಕೆ.ರಾಜು,
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್ ಅರುಣ್, ಎನ್.ಹೆಚ್.ಎ ಅಧಿಕಾರಿಗಳು
ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!