ತೇಜಸ್ವಿ ಸೂರ್ಯರಿಂದ ಮತೀಯ ದ್ವೇಷ : ಮಾಜಿ ಮೇಯರ್ ಕೆ.ಅಶ್ರಫ್
ಮಂಗಳೂರು,ಮೇ 05, 2021:ಕೋರೋನ ನಿಯಂತ್ರಣ ವಿಫಲತೆಯನ್ನು ಮರೆಮಾಚಿಸಲು ಸಂಸದ ತೇಜಸ್ವಿ ಸೂರ್ಯ ಬೆಡ್ ಲಾಕಿಂಗ್ ವಿಷಯವನ್ನು ಮತೀಯ ದ್ವೇಷಕ್ಕೆ ಪರಿವರ್ತಿಸಿದ್ದಾರೆ ಎಂದು ಮಾಜಿ ಮೇಯರ್ ಕೆ ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದೀಚೆಗೆ ಬೆಂಗಳೂರಿನಲ್ಲಿ ಆಗುತ್ತಿರುವ ನೂರಾರು ಜನರ ಸಾವು ನೋವುಗಳ ದುರ್ಘಟನೆ ಗಳನ್ನು ಕಣ್ಣು ಹಾಯಿಸಿ ಕೂಡಾ ನೋಡದೆ ಇದ್ದ ಸಂಸದ ತೇಜಸ್ವಿ ಸೂರ್ಯ, ಇದೀಗ ಬಿ.ಬಿ.ಎಂ.ಪಿ. ಕೋರೋನ ವಾರ್ ರೂಮ್ ನಲ್ಲಿ ಅಧಿಕಾರಿಗಳು ನಕಲಿ ರೋಗಿಗಳ ಹೆಸರು ನೊಂದಾಯಿಸಿ ಬೆಡ್ ಬ್ಲಾಕ್ ಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಪಕ್ಷದ ಸರ್ಕಾರದ ವಿರುದ್ಧ ಜನಾಕ್ರೋಶ ಸೃಷ್ಟಿಯಾಗುವುದನ್ನು ತಡೆಯಲು ಬೆಡ್ ಬ್ಲಾಕ್ ಕೃತ್ಯದಲ್ಲಿ ದಾಖಲಾದ ಮುಸ್ಲಿಮ್ ವ್ಯಕ್ತಿಗಳ ಹೆಸರನ್ನು ವೈಭವೀಕರಿಸಿ, ಕೋವಿಡ್ ದುರಂತಕ್ಕೆ ಮುಸ್ಲಿಮರು ಕಾರಣ ಎಂಬ ರೀತಿಯಲ್ಲಿ ಹೇಳಿಕೆ ಕೊಟ್ಟು, ಮತೀಯ ಉದ್ವಿಗ್ನತೆಯನ್ನು ಸೃಷ್ಟಿಸಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಸಂಸದ ಪ್ರಯತ್ನಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅಶ್ರಫ್ ಹೇಳಿದ್ದಾರೆ.
ಬಿ.ಬಿ.ಎಂ.ಪಿ.ಯಲ್ಲಿ ನಡೆದ ಬೆಡ್ ಬ್ಲಾಕ್ ಕೃತ್ಯದ ಬಗ್ಗೆ ತನ್ನದೇ ಸರಕಾರದ ಪೊಲೀಸು ಇಲಾಖೆ ಮುಖಾಂತರ ಸೂಕ್ತ ಮತ್ತು ಸಮಗ್ರ ತನಿಖೆ ನಡೆಸಲಿ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲಿ. ಹಾಗೆಂದು ರೋಗಿಗಳ ನೋಂದಣಿ ಪಟ್ಟಿಯಲ್ಲಿ ಮುಸ್ಲಿಮ್ ಹೆಸರು ದಾಖಲಿದೆ ಎಂದು ಘಟನೆಯನ್ನು ಮತೀಯ ಉದ್ವಿಗ್ನತೆಗೆ ಪರಿವರ್ತಿಸಿದರೆ ಈಗಾಗಲೇ ಆದ ಜೀವ ಹಾನಿಯೊಂದಿಗೆ, ಇತರ ಹಾನಿಗಳಾಗಬಹುದು ಎಂದು ಎಚ್ಚರಿಸಿದ್ದಾರೆ.
“ಕರ್ನಾಟಕದ ಜನತೆ ಈಗಾಗಲೇ ನಿಮ್ಮ ವರ್ತನೆಯ ರಹಸ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ನೀವು ಅರಿವು ಮಾಡಿಕೊಳ್ಳಿ. ಪ್ರಸ್ತುತ ನಾವು ಎದುರಿಸುತ್ತಿರುವ ಸಂಕಷ್ಟವನ್ನೂ, ದುರಂತವನ್ನೂ ನಿಯಂತ್ರಿಸಲು ಪ್ರಯತ್ನಿಸಿ, ಹೊರತಾಗಿ ತಿನ್ನುವ ಅನ್ನದಿಂದ ಹಿಡಿದು ಉಸಿರಾಡುವ ಗಾಳಿ, ವಾತಾವರಣದ ಉಷ್ಣತೆವರೆಗೆ ಎಲ್ಲವನ್ನೂ ಕೋಮು ಮನಸ್ಥಿತಿ ಯಿಂದ ನೋಡುವ ನಿಮ್ಮ ಬಾಲಿಶ ವರ್ತನೆಗೆ ನಮ್ಮ ಖಂಡನೆ ಇದೆ,” ಎಂದು ಅಶ್ರಫ್ ತಿಳಿಸಿದ್ದಾರೆ.