ಧರ್ಮಸ್ಥಳ ಕಿಂಡಿ ಅಣೆಕಟ್ಟು ನಿರ್ಮಾಣ: ಕಾಮಗಾರಿ ವೀಕ್ಷಿಸಿದ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ, ಮಾರ್ಚ್ 29, 2021: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಗ್ರಾಮದ ಮುಳಿಕ್ಕಾರು ಎಂಬಲ್ಲಿ ನೆರಿಯಾ ನದಿಗೆ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟಿನ ಕಾಮಗಾರಿಯನ್ನು ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಹಾಗೂ ಶಾಸಕ ಹರೀಶ್ ಪೂಂಜ ವೀಕ್ಷಿಸಿದರು.
ಈ ಅಣೆಕಟ್ಟಿನಿಂದ ಮುಂದೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾದರೂ ಅಣೆಕಟ್ಟಿನಿಂದ ಧರ್ಮಸ್ಥಳಕ್ಕೆ ನೀರು ಸರಬರಾಜು ಮಾಡಲಾಗುವುದು. ಧರ್ಮಸ್ಥಳದಲ್ಲಿರುವ ಎಲ್ಲಾ ಓವರ್ಹೆಡ್ ಟ್ಯಾಂಕ್ಗಳಿಗೂ ನೀರು ತುಂಬಿಸಿ ನೀರಿನ ಸಮಸ್ಯೆ ಬಗೆ ಹರಿಯಲಿದೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ
ಕರ್ನಾಟಕ ಸರ್ಕಾರ, ಸಣ್ಣ ನೀರಾವರಿ ಇಲಾಖೆ ಹಾಗೂ ಈ ಬಗ್ಗೆ ವಿಶೇಷ ಪ್ರಯತ್ನ ಮಾಡಿದ ಶಾಸಕ ಹರೀಶ್ ಪೂಂಜ ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿ ಧರ್ಮಸ್ಥಳದ ಭಕ್ತರು ಹಾಗೂ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಕಳೆದ ವರ್ಷವೇ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 15 ಕೋಟಿ ರೂ. ಮಂಜೂರಾಗಿದ್ದು, ಕೊರೊನಾದಿಂದಾಗಿ ಒಂದು ವರ್ಷ ವಿಳಂಬವಾಗಿ ಕಾಮಗಾರಿ ಆರಂಭವಾಗಿದೆ. ಇದೇ ಫೆಬ್ರವರಿ 10 ಕ್ಕೆ ಕಾಮಗಾರಿ ಆರಂಭಿಸಿದ್ದು ಇದೇ ನವೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
Also read: Rama Sene leader Prasad Attavar arrested
ಗುತ್ತಿಗೆದಾರ ಅಶೋಕ ಕುಮಾರ್ ನೇತೃತ್ವದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಸೋಮವಾರದಿಂದ ಸೆಂಟ್ರಿಂಗ್ ಆರಂಭಗೊಂಡಿದೆ. ಕಿಂಡಿ ಅಣೆಕಟ್ಟು 86 ಮೀ. ಅಗಲ ಹಾಗೂ 7 ಮೀ ಎತ್ತರವಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗೋಕುಲ್ದಾಸ್ ಮಾಹಿತಿ ನೀಡಿದರು.
ಸಹಾಯಕ ಇಂಜಿನಿಯರುಗಳಾದ ವಿಷ್ಣು ಕಾಮತ್, ರಾಕೇಶ್ ಮತ್ತು ಶಿವಪ್ರಸನ್ನ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು. ವರ್ಷವಿಡೀ ಧರ್ಮಸ್ಥಳಕ್ಕೆ ಬೇಕಾದಷ್ಟು ನೀರು ಇಲ್ಲಿ ಸಂಗ್ರಹಿಸಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.