ಎಂಡೋಸಲ್ಫಾನ್ ಸಂತ್ರಸ್ತರ ಮಿತವೇತನ ಪಾವತಿ ಬಾಕಿ ಬಗ್ಗೆ ನಿರ್ದೇಶನಾಲಯಕ್ಕೆ ಪತ್ರ ಬರೆದು ಇತ್ಯರ್ಥ ಗೊಳಿಸಿ: ಜಿಲ್ಲಾಧಿಕಾರಿ
ಮಂಗಳೂರು, ಡಿ 06 2020: ಎಂಡೋಸಲ್ಫಾನ್ ಸಂತ್ರಸ್ತರ ಮಿತವೇತನ ಪಾವತಿ ಬಾಕಿಯಾಗಿರುವ ಕುರಿತು ಸಂಬಂಧಿಸಿದ ನಿರ್ದೇಶನಾಲಯಕ್ಕೆ ಪತ್ರ ಬರೆದು ಇತ್ಯರ್ಥಗೊಳಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಸೂಚಿಸಿದರು.
ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ತಾಲೂಕು ಮಟ್ಟದಲ್ಲಿ ಸಂತ್ರಸ್ತರ ಕಾರ್ಯಕ್ರಮದ ಬಗ್ಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಬೇಕು ಹಾಗೂ ಪ್ರತಿ ಮಾಸಿಕ ತಜ್ಞ ವೈದ್ಯರಿಂದ ನಡೆಸಲಾಗುತ್ತಿದ್ದ ಶಿಬಿರಗಳನ್ನು ಕೋವಿಡ್-19 ನಿಮಿತ್ತ ಸ್ಥಗಿತಗೊಳಿಸಿದ್ದು, ಶಿಬಿರವನ್ನು ಪುನ: ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುನರ್ವಸತಿ ಕೇಂದ್ರಗಳಲ್ಲಿ ಸಂತ್ರಸ್ತರಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳಾದ ಬ್ಯಾಗ್, ಕವರ್, ಚೀಲ, ಮ್ಯಾಟ್ ಹಾಗೂ ಹೂಗುಚ್ಛ ಮುಂತಾದವುಗಳಿಗೆ ತಾಲೂಕು ಮಟ್ಟದಲ್ಲಿ ಮಾರಾಟ ಮಾಡಲು ಸೂಕ್ರ ಕ್ರಮ ಕೈಗೊಳ್ಳಬೇಕೆಂದರು.
ಪುನರ್ವಸತಿ ಕೇಂದ್ರಗಳ ಕಾರ್ಯನಿರ್ವಹಣೆಯ ಬಗ್ಗೆ ತಹಶೀಲ್ದಾರರು ಹಾಗೂ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು ಹಾಗೂ ಸಂತ್ರಸ್ತರಿಗೆ ಬಸ್ ಪಾಸ್ ವಿತರಿಸುವ ಬಗ್ಗೆ ಕೆ.ಎಸ್.ಆರ್.ಟಿ.ಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.