ಉಜಿರೆ: ಎನ್.ಎಸ್.ಎಸ್. ಘಟಕದಿಂದ ಯುವದಿನ ಆಚರಣೆ
ಉಜಿರೆ.ಜ.12, 2023: “ಸುತ್ತಮುತ್ತಲಿನ ಪ್ರೇರಣೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿ ಅಧ್ಭುತ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ” ಎಂದು ಕನ್ಯಾಡಿಯ ಸೇವಾ ಭಾರತಿ ಸ್ಥಾಪಕರಾದ ಶ್ರೀ ಕೆ.ವಿನಾಯಕ ಅವರು ಹೇಳಿದರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಎನ್.ಎಸ್.ಎಸ್.ಘಟಕದಿಂದ ಆಚರಿಸಲ್ಪಟ್ಟ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ‘ ಯುವಸಪ್ತಾಹ ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಇವರು ಮಾತನಾಡುತ್ತಿದ್ದರು.
ಇವರು ವೈಯಕ್ತಿಕವಾಗಿ ಹಲವಾರು ಅನಾರೋಗ್ಯ ಕಾರಣಗಳಿಂದ ಬಳಲುತ್ತಿದ್ದರೂ ಸಮಾಜ ಸೇವೆಗೆ ಸ್ಪೂರ್ತಿಯಾದ ವಿಚಾರಗಳನ್ನು ಹಂಚಿಕೊಂಡರು.ತಾನು ಸ್ಥಾಪಿಸಿದಂತಹ ಸೇವಾಧಾಮ ಮತ್ತು ಸೇವಾ ಭಾರತಿಯ ಮುಖ್ಯ ಉದ್ದೇಶಗಳ ಕುರಿತು ಮಾತನಾಡಿದರು.ಕರ್ನಾಟಕದಲ್ಲಿ ವಿಕಲಚೇತನರಿಗೆ ಇನ್ನಷ್ಟು ಪುನಶ್ಚೇತನ ಕೇಂದ್ರಗಳು ಆರಂಭವಾದರೆ ಕರ್ನಾಟಕ ರಾಜ್ಯವು ಅಭಿವೃದ್ಧಿಯಾಗುತ್ತದೆ ಎನ್ನುವ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎ.ಜಯಕುಮಾರ್ ಶೆಟ್ಟಿ ಮಾತನಾಡಿ ” ಮನುಷ್ಯತ್ವ ಪ್ರಜ್ವಲಿಸಿದಾಗ ನಮ್ಮ ವ್ಯಕ್ತಿತ್ವ ಬೆಳವಣಿಗೆ ಆಗುತ್ತದೆ ” ಎನ್ನುವ ಸ್ಪೂರ್ತಿದಾಯಕ ಮಾತುಗಳಿಂದ ಯುವಜನತೆಗೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಎನ್.ಎಸ್.ಎಸ್.ಘಟಕದ ಯೋಜನಾಧಿಕಾರಿಗಳಾದ ಪ್ರೊ. ದೀಪ ಮತ್ತು ಡಾ. ಲಕ್ಷ್ಮೀನಾರಾಯಣ ಕೆ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಘಟಕದ ಸ್ವಯಂಸೇವಕರಾದ ಅಂಜನಾ ನಿರೂಪಿಸಿ , ಸುದೇಶ್ ಸ್ವಾಗತಿಸಿ, ವಿನುತಾ ವಂದಿಸಿದರು.