ಸೂಪರ್ ಸ್ಪೆಷಾಲಿಟಿ ನಿರ್ಮಾಣಕ್ಕೂ ಮುನ್ನ ತಜ್ಞ ವೈದ್ಯರುಗಳ ನೇಮಕವಾಗಲಿ: ಮಾಧವ ನಾಯಕ ಆಗ್ರಹ
ಕಾರವಾರ, ನ 25, 2022: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಾಗ ಹುಡುಕುವುದು, ಭೂಮಿಪೂಜೆ ಮಾಡಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸೀಮಿತವಾಗದೆ,ಮೊದಲು ತಜ್ಞ ವೈದ್ಯರನ್ನು ತರುವ ಕೆಲಸ ಆಗಲಿ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಜನಪ್ರತಿನಿಧಿಗಳನ್ನ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದು ಶತಃಸಿದ್ಧ ಎಂದಮೇಲೆ ಹೊಸ ಆಸ್ಪತ್ರೆ ನಿರ್ಮಾಣವಾಗುವವರೆಗೂ ಕಾರವಾರದಲ್ಲಿರುವ ಕ್ರಿಮ್ಸ್ ಆಸ್ಪತ್ರೆಗೆ ತಜ್ಞ ವೈದ್ಯರನ್ನು( ನರರೋಗ, ಹೃದಯ,ಮೂತ್ರಪಿಂಡ, ಮೂತ್ರಕೋಶದ ತಜ್ಞರು ) ನೇಮಕ ಮಾಡಿ. ಸೂಪರ್ ಸ್ಪೆಷಾಲಿಟಿ ನಿರ್ಮಾಣವಾದ ಬಳಿಕ ಈ ವೈದ್ಯರುಗಳನ್ನು ಅಲ್ಲಿಗೆ ನಿಯೋಜಿಸಿ. ಮೂರ್ತಿಯೇ ಇಲ್ಲದೆ ಗುಡಿ ಕಟ್ಟಿ ಏನು ಪ್ರಯೋಜನ? ಕ್ರಿಮ್ಸ್ನಲ್ಲೂ ಕಟ್ಟಡ, ಇನ್ನಿತರ ಸೌಲಭ್ಯಗಳೆಲ್ಲಲ್ಲವೂ ಇದೆ. ಆದರೆ ತಜ್ಞ ವೈದ್ಯರಿಲ್ಲದೆ ಸೊರಗುತ್ತಿರುವುದನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ. ಇದೇ ಪರಿಸ್ಥಿತಿ ಮತ್ತೆ ಹೊಸ ಆಸ್ಪತ್ರೆಗೆ ಬರುವುದು ಕೇವಲ ಶಂಕುಸ್ಥಾಪನೆ, ಗುಡ್ಡಲಿಪೂಜೆ, ಯಂತ್ರೋಪಕರಣ ಖರೀದಿಸಿ ಕಾಟಾಚಾರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡ ಎಂದಿದ್ದಾರೆ.