ವಿ.ವಿ. ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ದಿನಾಚರಣೆ
ಮಂಗಳೂರು, ಸೆ 12, 2022: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಇಲ್ಲಿನ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿ, ಸಂಧ್ಯಾ ಕಾಲೇಜಿನ ಶಿಕ್ಷಣವು ಸಮಯದ ಹೊಂದಾಣಿಕೆಯೇ ಹೊರತು ಹಗಲು ಶಿಕ್ಷಣದಿಂದ ಭಿನ್ನವಾಗಿಲ್ಲ. ಸ್ನಾತಕೋತ್ತರ ಶಿಕ್ಷಣವು ವಿದ್ಯಾರ್ಥಿಯ ಉದ್ಯೋಗ ಕ್ಷೇತ್ರದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಶ್ರೇಯಸ್ಸನ್ನು ನೀಡುತ್ತದೆ ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್ ಕಾರ್ಕಳ ತಿಳಿಸಿದರು.
ಕಾರ್ಯಭಾರ ಲೆಕ್ಕಿಸದೆ ಸಂಧ್ಯಾ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಇರುತ್ತದೆ. ಅವರ ಸುಪ್ತ ಪ್ರತಿಭೆ ಕ್ಲಪ್ತ ಸಮಯದಲ್ಲಿ ವ್ಯಕ್ತವಾಗಲು ಸಂಧ್ಯಾ ಕಾಲೇಜು ಸ್ಪೂರ್ತಿದಾಯಕವಾದುದು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಜಿಎಸ್ಟಿ ವಿಭಾಗದ ಸಂಯೋಜಕರಾದ ಡಾ. ಯತೀಶ್ ಕುಮಾರ್ , ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಡಾ. ಮಾಧವ ಎಂ.ಕೆ. , ಎಂಬಿಎ (ಐಬಿ) ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಜಗದೀಶ್ ಬಿ., ಕೊಂಕಣಿ ಸ್ನಾತಕೋತ್ತರ ವಿಭಾಗದ ಡಾ. ದೇವದಾಸ್ ಪೈ ಉಪಸ್ಥಿತರಿದ್ದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ವಿ.ವಿ. ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಸುಭಾಶ್ಚಂದ್ರ ಕಣ್ವತೀರ್ಥ ವಂದಿಸಿ, ಪ್ರಶಾಂತಿ ಶೆಟ್ಟಿ ಇರುವೈಲು ನಿರೂಪಿಸಿದರು.