ನೇತ್ರದಾನ ಮಾಡಲು ಡಿ.ಎಚ್.ಒ ಕರೆ


ಮಂಗಳೂರು,ಸೆ.09, 2022: ಮರಣದ ನಂತರವೂ ತಾನು ಮಾಡಿದ ನೇತ್ರದಾನದಿಂದ ವ್ಯಕ್ತಿ ಬದುಕಿರುತ್ತಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ-2022 ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನೇತ್ರ ದಾನ ಹಾಗೂ ಅಂಗಾಂಗ ದಾನದ ಪ್ರಮಾಣ ಅತಿ ಕಡಿಮೆ. ಕೆಲವೊಂದು ಮೂಢನಂಬಿಕೆಗಳು ಇದಕ್ಕೆ ಕಾರಣವಿರಬಹುದು, ಮೂಢನಂಬಿಕೆಗಳನ್ನು ಹೋಗಲಾಡಿಸಿ ಪ್ರತಿಯೊಬ್ಬರು ನೇತ್ರದಾನ ಮಾಡುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶ್ಯಾನುಭೋಗ್ ಮಾತನಾಡಿ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿಯೂ ಕಾರ್ನಿಯಾ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ನೇತ್ರದಾನದಿಂದಾಗಿ ಇಂತಹ ಲಕ್ಷಾಂತರ ಮಕ್ಕಳ ಅಂಧತ್ವಕೂಡ ಹೋಗಲಾಡಿಸಬಹುದಾಗಿದೆ ಎಂದರು.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್, ವಿಶಾಲ ಮನೋಭಾವ ಬೆಳೆಸಿಕೊಂಡು ನೇತ್ರದಾನಕ್ಕೆ ಮುಂದಾಗಬೇಕು. ಈ ಬಗ್ಗೆ ಇನ್ನಷ್ಟು ವ್ಯಾಪಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ವೆನ್ಲಾಕ್ ಆಸ್ಪತ್ರೆಯ ಹಿರಿಯ ನೇತ್ರ ತಜ್ಞೆ ಡಾ.ಸೌಮ್ಯ ಅವರು, ಕಾರ್ನಿಯಲ್ ಕುರುಡುತನವನ್ನು ಗುಣಪಡಿಸಬಹುದು. ಆದರೆ ಅದಕ್ಕೆ ನೇತ್ರ ಲಭ್ಯವಾಗಬೇಕು. ನೇತ್ರದಾನ ಯಶಸ್ವಿಯಾಗಬೇಕಾದರೆ ನೇತ್ರದಾನ ಮಾಡಿದವರ ಕುಟುಂಬದವರ ಸಹಕಾರಕೂಡ ಮುಖ್ಯ. ನೇತ್ರದಾನ ಮಾಡಿದವರು ಮೃತಪಟ್ಟ ನಂತರ ಅವರ ಕುಟುಂಬಿಕರು ಒಪ್ಪಿದರೆ ಮಾತ್ರ ನೇತ್ರ ಪಡೆಯಲು ಸಾಧ್ಯ. ಗಂಭೀರವಾದ ಕೆಲವೊಂದು ಕಾಯಿಲೆಗಳು ಇರುವವರನ್ನು ಹೊರತುಪಡಿಸಿದರೆ ಯಾರೂ ಬೇಕಾದರೂ ನೇತ್ರಗಳನ್ನು ದಾನ ಮಾಡಬಹುದಾಗಿದೆ. ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ನೇತ್ರವನ್ನು ತೆಗೆಯಬೇಕು. ಮೃತಪಟ್ಟ ವ್ಯಕ್ತಿಯ ನೇತ್ರ ಒಣಗದಂತೆ ಎಚ್ಚರಿಕೆ ವಹಿಸಬೇಕು. ನೇತ್ರ ಬೇರ್ಪಡಿಸುವ ಪ್ರಕ್ರಿಯೆಯನ್ನು ಕಡಿಮೆ ಅವಧಿಯಲ್ಲಿ ಸರಳವಾಗಿ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಪದ್ಮಾವತಿ ಅವರು ‘ಅಂಗಾಂಗ ದಾನದ ಮಹತ್ವ’ದ ಕುರಿತು ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಅವರು ಕಾರ್ಯಕ್ರಮ ಉದ್ಘಾಟಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪಭೋವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್‍ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ., ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಡಾ.ಸುದರ್ಶನ್ ಹಾಗೂ ವೈದ್ಯಾಧಿಕಾರಿಗಳು ವಿದ್ಯಾರ್ಧಿಗಳು, ನೇತ್ರದಾನ ಪ್ರತಿಜ್ಞೆ ಮಾಡಿದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ನೇತ್ರದಾನ ಪ್ರತಿಜ್ಞೆ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.