ಏ.18 ರಿಂದ ತಾಲೂಕು ಮಟ್ಟದ ಆರೋಗ್ಯ ಮೇಳ: ಡಾ. ಕಿಶೋರ್ ಕುಮಾರ್

 ಏ.18 ರಿಂದ ತಾಲೂಕು ಮಟ್ಟದ ಆರೋಗ್ಯ ಮೇಳ: ಡಾ. ಕಿಶೋರ್ ಕುಮಾರ್
Share this post

ಮಂಗಳೂರು,ಏ.16, 2022: ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಆರೋಗ್ಯ ಮೇಳಗಳನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ ಕಾರಣ ಏ.18ರಿಂದ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅವರು ಹೇಳಿದರು.

ನಗರದ ಲೋಕೋಪಯೋಗಿ ಕಟ್ಟಡದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಅವರು ಏ.16ರ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತಾಲೂಕು ಮಟ್ಟದ ಆರೋಗ್ಯ ಮೇಳಗಳು ಏ.18ರಂದು ಪುತ್ತೂರು ಸುಧಾನ ವಸತಿ ಶಾಲೆಯಲ್ಲಿ, ಏ.19ರಂದು ಬೆಳ್ತಂಗಡಿಯ ಕೃಷ್ಣಾನುಗೃಹ ಸಭಾಂಗಣದಲ್ಲಿ, ಏ.20ರಂದು ಸುತರ್ಕಲ್ ಆರೋಗ್ಯ ಕೇಂದ್ರ, ಏ.21ರಂದು ಬಂಟ್ವಾಳದ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಏ.22ರಂದು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಮೇಳದಲ್ಲಿ ಆಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ನೀಡುವ ಜತೆಗೆ ಸ್ಥಳದಲ್ಲೇ ರೇಶನ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್ ನೀಡುವವರಿಗೆ ಕಾರ್ಡ್ ವಿತರಿಸಲಾಗುವುದು. ಇದೇ ವೇಳೆ ಹೆಲ್ತ್ ಕಾರ್ಡ್ ನೀಡುವ ಬಗ್ಗೆಯೂ ಕ್ರಮ ವಹಿಸಲಾಗಿದೆ. ಈ ಆರೋಗ್ಯ ಕಾರ್ಡ್ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಅಗತ್ಯವಾಗಿದ್ದು, ಈ ಕಾರ್ಡ್ ಹೊಂದಿರುವವರು ಈ ಹಿಂದೆ ಯಾವುದೇ ಆಸ್ಪತ್ರೆಯಲ್ಲಿ ಪಡೆದಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಮುಂದಿನ ಚಿಕಿತ್ಸೆಯ ವೇಳೆ ಆ ಆಸ್ಪತ್ರೆಯ ವೈದ್ಯರಿಗೆ ಲಭ್ಯವಾಗಲಿದೆ. ಇದೇ ವೇಳೆ ಸಾಂಕ್ರಾಮಿಕ ರಹಿತ ರೋಗಗಳ ಸ್ಕ್ರೀನಿಂಗ್ ನಡೆಸುವ ಕಾರ್ಯವೂ ನಡೆಯಲಿದೆ. ಡಯಾಬಿಟಿಕ್, ಹೈಪರ್ ಟೆನ್ಶನ್, ಕ್ಯಾನ್ಸರ್‍ನಂತಹ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸಮಾಲೋಚನೆ ನೀಡುವ ಕಾರ್ಯ ಈ ಮೇಳಗಳ ಮೂಲಕ ನಡೆಸಲಾಗುವುದು ಎಂದು ಅವರು ಹೇಳಿದರು.

ಮೇಳದಲ್ಲಿ ಆಹಾರ ಕಲಬೆರಕೆ ಕುರಿತಂತೆ ಜನಸಾಮಾನ್ಯರಿಗೆ ಸರಳ ಮಾಹಿತಿಗಳನ್ನು ಒದಗಿಸಲಾಗುವುದು. ಮೇಳದಲ್ಲಿ ಎಲ್ಲಾ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸೇವಾ ಸೌಲಭ್ಯಗಳು ಲಭ್ಯವಿರಲಿವೆ. ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಅರಿವು ಮಾಹಿತಿ ಪ್ರದರ್ಶನ ಮಳಿಗೆ ಇರಲಿದೆ. ತಾಯಿ ಮತ್ತು ಮಗುವಿನ ಆರೋಗ್ಯ, ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ ಶಿಬಿರ, ಆಯುಷ್ ಗಿಡಮೂಲಿಕೆಗಳ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ, ಯೋಗ ಶಿಕ್ಷಕರ ಮೂಲಕ ಯೋಗ ಪ್ರದರ್ಶನ ಹಾಗೂ ಮಾಹಿತಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಪ್ರಹಸನ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.

ಕೋವಿಡ್ ಪರೀಕ್ಷೆ ಜಿಲ್ಲೆಗೆ ದಿನಕ್ಕೆ 350 ರಂತೆನಿಗದಿಯಾಗಿದ್ದರೂ, ಜಿಲ್ಲೆಯಲ್ಲಿ ಸುಮಾರು 450ರಷ್ಟು ಪರೀಕ್ಷೆ ನಡೆಯುತ್ತಿದೆ. ಪಾಸಿಟಿವಿಟಿ ದರವೂ ಗಣನೀಯವಾಗಿ ತಗ್ಗಿದೆ. ಹಾಗಾಗಿ ಯಾವುದೇ ಆತಂಕ ಇಲ್ಲ, ಇದಕ್ಕೆ ಲಸೀಕರಣವೂ ಪ್ರಮುಖ ಕಾರಣ ಎಂದರು.

ಬೂಸ್ಟರ್ ಡೋಸ್ ಲಸಿಕೆ ಸದ್ಯ 60 ವರ್ಷ ಮೇಲ್ಪಟ್ಟವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡುತ್ತಿದ್ದರೆ, ಉಳಿದಂತೆ 18 ವರ್ಷದಿಂದ 60 ವರ್ಷದೊಳಗಿನವರು ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರ ಪಾವತಿಸಿ ಪಡೆಯಬೇಕಾಗಿದೆ. ಜಿಲ್ಲೆಯಲ್ಲಿ ಶೇ.50ರಷ್ಟು 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆದಿದ್ದು, ಶೇ.65 ಮಂದಿ ಮುಂಚೂಣಿ ಕಾರ್ಯಕರ್ತರು ಪಡೆದಿದ್ದಾರೆ. ಶೇ. 49ರಷ್ಟು ಆರೋಗ್ಯ ಕಾರ್ಯಕರ್ತರು ಪಡೆದಿದ್ದಾರೆ. 2ನೆ ಡೋಸ್ ಪಡೆದವರು 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಈ ನಡುವೆ ಕೋವಿಡ್ ಪಾಸಿಟಿವ್ ಆದಲ್ಲಿ ಮತ್ತೆ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಪಡೆಯುತ್ತಾರೆ ಎಂದು ಡಾ. ಕಿಶೋರ್ ಕುಮಾರ್ ವಿವರಿಸಿದರು.

ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಗೆ ಕೊರತೆ ಇಲ್ಲ. 12ರಿಂದ 14 ವರ್ಷದೊಳಗಿನ ಪ್ರಾಯದವರಿಗೂ ಕಲೆದ ಒಂದು ತಿಂಗಳಿನಿಂದ ಲಸಿಕೆ ನೀಡುವ  ಕಾರ್ಯ ನಡೆಯುತ್ತಿದ್ದು, ಈಗಾಗಲೇ ಶೇ. 83 ಮಂದಿ ಪ್ರಥಮ ಡೋಸ್ ಪಡೆದಿದ್ದಾರೆ ಎಂದವರು ಹೇಳಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!