ದಾಖಲಾತಿ, ಸೌಲಭ್ಯಗಳನ್ನು ಅವಧಿಯೊಳಗೆ ತಲುಪಿಸಲು ಜಿಲ್ಲಾಧಿಕಾರಿ ಸೂಚನೆ

 ದಾಖಲಾತಿ, ಸೌಲಭ್ಯಗಳನ್ನು ಅವಧಿಯೊಳಗೆ ತಲುಪಿಸಲು ಜಿಲ್ಲಾಧಿಕಾರಿ ಸೂಚನೆ
Share this post
  • ಸುಳ್ಯಪದವಿನಲ್ಲಿ ಗ್ರಾಮವಾಸ್ತವ್ಯ
  • ಸ್ಥಳದಲ್ಲೇ 80 ಅರ್ಜಿ ವಿಲೇವಾರಿ

ಮಂಗಳೂರು,ಏ.16, 2022: ಸರ್ಕಾರದಿಂದ ನೀಡಲಾಗುವ ಅಧಿಕೃತ ದಾಖಲಾತಿಗಳು ಹಾಗೂ ಸೌಲಭ್ಯಗಳನ್ನು ಅರ್ಹರಿಗೆ ಅವಧಿಯೊಳಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಏ.16ರ ಶನಿವಾರ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಯಪದವಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪುತ್ತೂರು ತಾಲೂಕು ಪತ್ರಕರ್ತರ ಸಂಘ, ಬಡಗನ್ನೂರು ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ – ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತಾನಾಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ – ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 163 ಅಹವಾಲು ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 80 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು.  

94ಸಿ, 94ಸಿಸಿ ಸಮರ್ಪಕವಾಗಿ, ಕಾನೂನು ಬದ್ಧವಾಗಿರುವ ಬಹುತೇಕ ಕಡತಗಳು ವಿಲೇವಾರಿ ಆಗಿದೆ. ವಿಲೇವಾರಿ ಮಾಡಲು ಅವಕಾಶ ಇರುವ ಎಲ್ಲಾ ಕಡತಗಳು ಕೂಡಲೇ ವಿಲೇವಾರಿ  ಮಾಡಬೇಕು. ಕಾನೂನುಬದ್ಧವಾಗಿ ಇದ್ದ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಬೇಕು ಎಂದ ಅವರು ಅಕ್ರಮ ಸಕ್ರಮ, 94-ಸಿ ಹಕ್ಕು ಪತ್ರ ನೀಡಿದ ಮೇಲೆ ಆರ್‍ಟಿಸಿ ಮತ್ತು 9/11ನಲ್ಲಿ ದಾಖಲಾತಿ ಮಾಡಬೇಕು. ಗ್ರಾಮಸ್ಥರಿಗೆ ವಿಳಂಬ ಮಾಡಬಾರದು ಹಾಗೂ ಅವರನ್ನು ಅಲೆದಾಡುವಂತೆ ಮಾಡಬಾರದು ಎಂದರು.

ಒಂದೊಂದು ಭಾಗದ ಎಲ್ಲಾ ಅಕ್ರಮ ಸಕ್ರಮ ಕಡತಗಳನ್ನು ತಯಾರಿಸಿ ಪಂಚಾಯತ್‍ನಲ್ಲಿ ಪ್ರಚುರಪಡಿಸಬೇಕು. ಆಕ್ಷೇಪಣೆ ಇದ್ದರೆ ಅದನ್ನು ಅಕ್ರಮ ಸಕ್ರಮ  ಸಮಿತಿಯ ಮುಂದೆ ಇಟ್ಟು ಅಲ್ಲಿ ವಿಲೇವಾರಿ ಮಾಡಬೇಕು, ಒಂದು ತಿಂಗಳಲ್ಲಿ ಎಲ್ಲಾ ಅಕ್ರಮ ಸಕ್ರಮ ಅರ್ಜಿಗಳ ಕಡತಗಳನ್ನು ತಯಾರು ಮಾಡಿ ಸಮಿತಿಯ ಮುಂದೆ ಕಡ್ಡಾಯವಾಗಿ ಇಡಬೇಕು ಎಂದು ಅವರು ಹೇಳಿದರು.

ಅರಣ್ಯದ ಮೂಲಕ ಹಾದು ಹೋಗುವ ಈಗಾಗಲೇ ಇರುವ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಯವರು, ಕಿಂಡಿ ಅಣೆಕಟ್ಟುಗಳ ಕಸ, ಮರ ಇದ್ದರೆ ಅದನ್ನು ತೆರವು ಮಾಡಲು ಕ್ರಿಯಾ ಯೋಜನೆ ರೂಪಿಸುವಂತೆ ತಿಳಿಸಿದರು.

ನಿರ್ವಹಣೆಗೆ ಹಣ ಇಲ್ಲದೆ ಕಿಂಡಿ ಅಣೆಕಟ್ಟು ಹಾಳಾಗಿ ಹೋಗುತ್ತದೆ. ಹಿಂದೆ ಮಾಡಿದ ಡ್ಯಾಂ ನಿರ್ವಹಣೆಗೆ ಕ್ರಮ ಆಗಬೇಕು ಎಂದು ಶಾಸಕರು ತಿಳಿಸಿದರು. ಬಡಗನ್ನೂರು ಪಟ್ಟೆ ಎಂಬಲ್ಲಿ ವೆಂಟೆಡ್ ಡ್ಯಾಂ ನಿರ್ವಹಣೆಯ ಬಗ್ಗೆ ಚರ್ಚೆ ನಡೆದು ವೆಂಟೆಡ್ ಡ್ಯಾಂ ನಿರ್ವಹಣೆಗೆ ಸ್ಥಳಿಯರು ಮತ್ತು ಗ್ರಾಮ ಪಂಚಾಯತ್ ಸೇರಿ ಕ್ರಿಯಾ ಯೋಜನೆ ರೂಪಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಗ್ರಾಮದ ಕಚ್ಚಾ ರಸ್ತೆಗಳ ಅಭಿವೃದ್ಧಿ ಬಗ್ಗೆ ಒಂದು ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮತ್ತು ಶಾಸಕರಿಗೆ ಸಲ್ಲಿಸಿ ಅನುದಾನದ ಲಭ್ಯತೆಗೆ ಅನುಸಾರವಾಗಿ ಅನುದಾನ ನೀಡಲಾಗುವುದು ಎಂದ ಜಿಲ್ಲಾಧಿಕಾರಿಯವರು, ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಮಾಡುವಂತೆ ಅವರು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮಕೈಗೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಮುಗುಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದರು.

ಕಲ್ಲುಗುಡ್ಡೆ, ಕರ್ಪುಡಿಕಾನ ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕ್‍ನಲ್ಲಿ ನೀರು ಸೋರಿಕೆಯಾಗುತಿದೆ ಎಂದು ಸಾರ್ವಜನಿಕರು ದೂರಿದಾಗ, ಅದನ್ನು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸುಳ್ಯಪದವಿನಲ್ಲಿ ಆರೋಗ್ಯ ಕೇಂದ್ರ, ಪಶು ಆರೋಗ್ಯ ಕೇಂದ್ರ, ಮೊಬೈಲ್ ಟವರ್, ಬ್ಯಾಂಕಿಂಗ್ ಮತ್ತು ಇತರ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿತ್ತು. ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿಕಾರಿ ಮಟ್ಟದಲ್ಲಿ ಆಗುವ ಕೆಲಸ ಆದ್ಯತೆಯ ಮೇರೆಗೆ ಮಾಡಲಾಗುವುದು. ಸರ್ಕಾರಿ ಮಟ್ಟದಲ್ಲಿ ಆಗುವ ಕೆಲಸಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಶಾಸಕ ಸಂಜೀವ ಮಠಂದೂರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಪುತ್ತೂರು ಡಿವೈಎಸ್‍ಪಿ ಗಾನಾ ಪಿ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ, ತಹಶೀಲ್ದಾರ್ ಟಿ. ರಮೇಶ್ ಬಾಬು, ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳದಲ್ಲೇ 80 ಅರ್ಜಿ ವಿಲೇವಾರಿ:
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ – ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 163 ಅಹವಾಲು ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 80 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು.  

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!