ಅತಿವೃಷ್ಟಿಯಿಂದ ಹಾನಿ: ಕೇಂದ್ರ ಅಧ್ಯಯನ ತಂಡದಿಂದ ಪರಿಶೀಲನೆ

 ಅತಿವೃಷ್ಟಿಯಿಂದ ಹಾನಿ: ಕೇಂದ್ರ ಅಧ್ಯಯನ ತಂಡದಿಂದ ಪರಿಶೀಲನೆ
Share this post

ಮಂಗಳೂರು, ಸೆ.08, 2022: ಅತಿವೃಷ್ಟಿ ಹಾನಿ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಸೆ.8ರ ಗುರುವಾರ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಹಾನಿಗೀಡಾದ ಕಡಲ ತೀರ, ರಸ್ತೆ, ಸೇತುವೆ, ಮನೆಗಳನ್ನು ಪರಿಶೀಲಿಸಿತು.

ಜಿಲ್ಲೆಯಲ್ಲಿ ಜುಲೈನಿಂದ ಸುರಿದ ತೀವ್ರ ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳಗಳು,  ಮೂಲಭೂತ ಸೌಕರ್ಯಗಳು, ಬೆಳೆ, ಮಾನವ ಹಾಗೂ ಜಾನುವಾರುಗಳ ಜೀವ ಹಾನಿ ಬಗ್ಗೆ ಅಧ್ಯಯನ ತಂಡಕ್ಕೆ ನಗರದ ಖಾಸಗಿ ಹೋಟೆಲಿನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮಾಹಿತಿ ನೀಡಿದರು.

ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಪರಿಹಾರಕ್ಕಾಗಿ ಒಟ್ಟು 311 ಕೋಟಿ ರೂ.ಗಳ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.

ನಂತರ ತಂಡವು ವಿಪರೀತ ಕಡಲ್ಕೊರೆತ ಉಂಟಾಗಿರುವ ಉಳ್ಳಾಲದ ಬಟಪ್ಪಾಡಿಗೆ ತೆರಳಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿತು. ರಸ್ತೆ ಹಾನಿ, ಕಡಲ್ಕೊರೆತದಿಂದಾದ ಹಾನಿ ವೀಕ್ಷಿಸಿದ ತಂಡದ ಸದಸ್ಯರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ನಂತರ  ಹೊಸಬೆಟ್ಟು-ಮೀನಕಳಿಗೆ ತೆರಳಿದ ಅವರು ಕಡಲ್ಕೊರೆತ, ರಸ್ತೆ ಹಾನಿ, ತೀವ್ರ ಮಳೆಯಿಂದಾಗಿ ಮನೆಗಳಿಗಾದ ಹಾನಿ ಸೇರಿದಂತೆ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾದ ಕಡಲ್ಕೊರೆತದ ಹಾಗೂ ಇತರೆ ಹಾನಿಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿತು.

ತಂಡದ ಮುಖ್ಯಸ್ಥರಾಗಿರುವ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್, ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಸಚಿವಾಲಯದ ಸಹಾಯಕ ನಿರ್ದೇಶಕಿ ಭವ್ಯ ಪಾಂಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಇದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೀತಾ, ತಹಶೀಲ್ದಾರ್ ಪುಟ್ಟರಾಜ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ವಿಜಯ್ ಕುಮಾರ್ ಪೂಜಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!