ಪರಿಸರ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು: ಶೋಭಾ ಬಿ.ಜಿ

 ಪರಿಸರ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು: ಶೋಭಾ ಬಿ.ಜಿ
Share this post

ಮಂಗಳೂರು,ಜೂ.5, 2024: ಕೇವಲ ಮರ, ಗಿಡಗಳನ್ನು  ನಾಶಗೊಳಿಸುವುದರಿಂದ ಮಾತ್ರ ಪರಿಸರ ನಾಶವಾಗುವುದಿಲ್ಲ, ಬದಲಾಗಿ ಪರಿಸರದ ಮಾಲಿನ್ಯದಿಂದಲೂ ಕೂಡ ಪರಿಸರ ನಾಶವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶೋಭಾ ಬಿ.ಜಿ. ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ವಿಶ್ವ ವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಕೈಗಾರಿಕಾ ಉದ್ದಿಮೆದಾರರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿಯ ಸಂಯುಕ್ತಾಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಾಮಾನ್ಯರು ತಮ್ಮ ಬೇಡಿಕೆಗಳ ಪೂರೈಕೆಗಾಗಿ ಭವಿಷ್ಯದ ಬಗ್ಗೆ ಯೋಚಿಸದೇ ಗಿಡ ಮರಗಳನ್ನು ನಾಶಗೊಳಿಸುತ್ತಿದ್ದೇವೆ, ಮುಂದೆ ಸಂಭವಿಸುವ ಅನಾಹುತಗಳ ಬಗ್ಗೆ ಯೋಚನೆ ಮಾಡುತ್ತಿಲ್ಲ. ನಾವು ಮರಗಳನ್ನು ನಾಶಗೊಳಿಸುವುದು ಮಾತ್ರವಲ್ಲ ಪ್ರತಿ ಮನೆಯಲ್ಲೂ  ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಬೇಕು. ಪರಿಸರ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು, ಬೆಳೆಸಿದ ಗಿಡಗಳನ್ನು ಸಂರಕ್ಷಿಸಬೇಕು, ಎಲ್ಲರೂ ಕೈ ಜೋಡಿಸಿ  ಪರಿಸರವನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕು ಎಂದು ಕರೆ ನೀಡಿದರು.

ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಎಸ್. ಮರಿಯಪ್ಪ ಅವರು ಮಾತನಾಡಿ ಜಾಗತಿಕ ತಾಪಮಾನವನ್ನು ಸಮತೋಲನದಲ್ಲಿ ಇರಿಸುವಲ್ಲಿ ಪರಿಸರದ ಪಾತ್ರ ಮಹತ್ತರವಾದದ್ದು, ಇಂದು ಗಿಡಮರಗಳ ನಾಶದಿಂದ ಅಂತರ್ಜಲ ಬತ್ತಿ ಹೋಗುತ್ತಿದೆ ಎಂದರು.

ಪ್ರತಿ ವರ್ಷವೂ ಅರಣ್ಯ ಇಲಾಖೆಯಿಂದ ಇಂತಹಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಹಾಗೂ ಗಿಡ ಮರಗಳನ್ನು ಬೆಳೆಸುತ್ತೇವೆ ಆದರೂ ಪ್ರತಿ ವರ್ಷವೂ ಮರ ಗಿಡಗಳ ಸಂಖ್ಯೆ ಕಡಿಮೆ ಆಗುತ್ತಿದೆ, ಅಂದರೆ ನಾವು ನಮ್ಮ ಉದ್ದೇಶಗಳಿಗಾಗಿ ಮರ ಗಿಡಗಳನ್ನು ಕಡಿಯುತ್ತಿದ್ದೇವೆ, ಅವುಗಳ ಸಂಖ್ಯೆಯನ್ನು ಸರಿದೂಗಿಸಬೇಕೆಂದರೆ ನಾವು ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.

ಮರ, ಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು, ಮಳೆನೀರಿನ ಕೊಯ್ಲುಗಳನ್ನು ಪ್ರತಿ ಮನೆಯಲ್ಲೂ ಅಳವಡಿಸುವುದರಿಂದ ಅಂತರ್ಜಲ ಕುಸಿತವನ್ನು ತಡೆಗಟ್ಟಬೇಕು, ದಿನನಿತ್ಯ ಬಳಸುವ ಅದೆಷ್ಟೋ ವಸ್ತುಗಳಿಂದ ನಾವೇ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದೇವೆ. ಆದ್ದರಿಂದ ಪರಿಸರ ದಿನದ ಮುಖ್ಯ ಉದ್ದೇಶವೇ ಪರಿಸರದಲ್ಲಿನ ಅಸಮತೋಲನವನ್ನು ಹೋಗಲಾಡಿಸಿ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಜಾಗೃತಿಯನ್ನು ಮೂಡಿಸುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಜ್ಯೂಟ್ (ಸೆಣಬು) ಚೀಲ, ಬಟ್ಟೆ ಚೀಲ ಮತ್ತು ಸಸಿಗಳನ್ನು ವಿತರಿಲಾಯಿತು ಹಾಗೂ ಪರಿಸರ ದಿನದ ಅಂಗವಾಗಿ ವಿವಿಧ ಕಾಲೇಜುಗಳಿಗೆ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ವಿವಿಧ ಕೈಗಾರಿಕಾ ವಲಯಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸುರತ್ಕಲ್ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರಾಜೇಂದ್ರ ಕಲ್ಬಾವಿ ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಾರನಾಥ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಿಜಯ ಹೆಗಡೆ, ಉಪ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್, ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗದ ಸಾಮಾಜಿಕ ಅರಣ್ಯ ವಿಭಾಗದ ಪಿ. ಶ್ರೀಧರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!