ವಿವಿಧ ಗುತ್ತಿಗೆದಾರರ ಸಂಘಟನೆಗಳ ಸಭೆ: ಕಾರ್ಮಿಕರ ಕೂಲಿಯ ಫಲಕ ಅಳವಡಿಸಲು ನಿರ್ಧಾರ

 ವಿವಿಧ ಗುತ್ತಿಗೆದಾರರ ಸಂಘಟನೆಗಳ ಸಭೆ: ಕಾರ್ಮಿಕರ ಕೂಲಿಯ ಫಲಕ ಅಳವಡಿಸಲು ನಿರ್ಧಾರ
Share this post

ಕಾರವಾರ, ಆ 24, 2022: ಕಾರ್ಮಿಕರಿಗೆ ಕೂಲಿದರ ನಿಗದಿಪಡಿಸಿದ ಫಲಕ ಅಳವಡಿಸಲು ಹಾಗೂ ಕಾರ್ಮಿಕರ ನಿಯಂತ್ರಣಕ್ಕೆ ಸಮಿತಿಯೊಂದನ್ನು ರಚಿಸಿ, ಅದರ ಕಚೇರಿ ತೆರೆಯಲು ನಗರದ ಅಜ್ವಿ ಓಶಿಯನ್ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ವಿವಿಧ ಗುತ್ತಿಗೆದಾರರ ಸಂಘಟನೆಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯ, ದೇಶದಲ್ಲೆಲ್ಲೂ ಇರದಷ್ಟು ದುಬಾರಿ ಕೂಲಿದರ ನಗರದಲ್ಲಿದ್ದು, ಕಾರ್ಮಿಕರನ್ನು ಗುತ್ತಿಗೆದಾರರೇ ಮಾರುಕಟ್ಟೆಗೆ ಬಂದು ಕರೆದೊಯ್ಯುವ ಪದ್ಧತಿ ರೂಢಿಗತವಾಗಿದೆ. ತನಗೆ ಯಾವ ಗುತ್ತಿಗೆದಾರ ಬೇಕೆನ್ನುವುದನ್ನು ಕೂಲಿಕಾರ್ಮಿಕನೇ ಆಯ್ಕೆ ಮಾಡುವ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಿ, ಎಲ್ಲರಿಗೂ ಅನುಕೂಲವಾಗುವಂತೆ ಕಾರ್ಮಿಕರ ಕೂಲಿದರ ನಿಗದಿಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.

ಸಭೆಯಲ್ಲಿ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್, ಬಿಲ್ಡರ್ಸ್ ಅಸೋಸಿಯೇಶನ್, ಕಾರ್ಪೆಂಟರ್ ಅಸೋಸಿಯೇಶನ್, ಸೆಂಟ್ರಿಂಗ್ ಅಸೋಸಿಯೇಶನ್, ಟೈಲ್ಸ್ ಫಿಟ್ಟಿಂಗ್ ಅಸೋಸಿಯೇಶನ್ ಸೇರಿದಂತೆ ವಿವಿಧ ಗುತ್ತಿಗೆದಾರರ ಸಂಘಟನೆಗಳ ಪದಾಧಿಕಾರಿಗಳು, ಮೇಸ್ತ್ರಿ, ಕಾಂಕ್ರೀಟ್‌ನವರು ಪಾಲ್ಗೊಂಡಿದ್ದರು. ಇಂಥದ್ದೊಂದು ಸಭೆಯನ್ನ ಆಯೋಜಿಸಿದ್ದಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ಈ ಸಭೆ ನಡೆಯುತ್ತಿದ್ದು, ಇದು ಬೇಡಿಕೆಯ ಮತ್ತು ಅನಿವಾರ್ಯದ ಸಭೆಯಾಗಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಸೆಂಟ್ರಿಂಗ್ ಅಸೋಸಿಯೇಶನ್‌ನ ಜ್ಞಾನೇಶ್ವರ ಈ ವೇಳೆ ಮಾತನಾಡಿ, ಇದೇ ವಿಚಾರಕ್ಕೆ ಸಂಬಂಧಿಸಿ ನಾನು ಕಳೆದ 30 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಈ ಹಿಂದಿನ ಸಂಘಟನೆಗಳ ಪದಾಧಿಕಾರಿಗಳ ಬೆಂಬಲ ಸಿಗದ ಕಾರಣ ಫಲಪ್ರದವಾಗಿರಲಿಲ್ಲ. ಅಲ್ಲದೇ ನಾನು ಈ ಬಗ್ಗೆ ಅನುಷ್ಠಾನಕ್ಕೆ ಮುಂದಾದಾಗ ನನ್ನ ಧ್ವನಿಯನ್ನ ಹತ್ತಿಕ್ಕಲು ಕೆಲವರು ಮುಂದಾದ ಕಾರಣ ಸುಮ್ಮನಾಗಿದ್ದೆ. ಈಗ ಎಲ್ಲರಲ್ಲೂ ಒಮ್ಮತದ ಅಭಿಪ್ರಾಯ ಬಂದಿರುವುದು ಖುಷಿಯ ವಿಚಾರವೆಂದರು.

ಒಬ್ಬ ಗೌಂಡಿ ಸರಿಯಾಗಿ ಕೆಲಸ ಮಾಡದಿದ್ದರೂ 1,500 ರೂ. ದಿನದ ಕೂಲಿ ಕೇಳುತ್ತಾನೆ. ಕಾರ್ಮಿಕರನ್ನ ಕೆಲಸಕ್ಕೆ ಕರೆದುಕೊಂಡು ಹೋದರೆ, ಕೆಲಸ ಸ್ಥಳದಲ್ಲಿ ತಮಗೇ ಗುತ್ತಿಗೆ ಕೊಡಿ, ನಾವು ಮಾಡುತ್ತೇವೆ ಎಂದು ಗುತ್ತಿಗೆದಾರರ ಮೇಲೆಯೇ ಸವಾರಿ ಮಾಡುವ ಪ್ರಸಂಗಗಳೂ ನಡೆದಿವೆ, ನಡೆಯುತ್ತಿವೆ. ಮಧ್ಯಾಹ್ನದೊಳಗೆ ಕೆಲಸ ಮುಗಿಸಿ ದಿನಕ್ಕೆ 3- 4 ಸಾವಿರ ಕೇಳುತ್ತಿದ್ದಾರೆ ಎಂದು ಸಭೆಯಲ್ಲಿ ವಿವಿಧ ಗುತ್ತಿಗೆದಾರರು ಹೇಳಿಕೊಂಡರು.

ಅಂತಿಮವಾಗಿ, ಕಾರ್ಮಿಕರ ಕೂಲಿದರ ನಿಗದಿ ಮಾಡಿ, ಕಾರ್ಮಿಕರು ನಿಲ್ಲುವ ಸಿದ್ದಿವಿನಾಯಕ ದೇವಸ್ಥಾನ- ಅರ್ಬನ್ ಬ್ಯಾಂಕ್ ಬಳಿ ಫಲಕ ಅಳವಡಿಸಬೇಕು. ಬೆಳಿಗ್ಗೆ 9 ಗಂಟೆಯ ನಂತರ ಯಾವ ಕೂಲಿಕಾರ್ಮಿಕನೂ ಅಲ್ಲಿ ಗುತ್ತಿಗೆದಾರರನ್ನ ಕಾದು ನಿಲ್ಲದಂತೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು 8 ತಾಸು ಕೆಲಸ ಮಾಡಬೇಕು. ಇದರ ಜೊತೆಗೆ, ಒಂದು ಸಮಿತಿ ರಚಿಸಿ, ಅದರ ಹೆಸರಿನಲ್ಲಿ ಕಚೇರಿಯೊಂದನ್ನು ತೆರೆದು ಕಾರ್ಮಿಕರಿಗೂ ಅನುಕೂಲ ಮಾಡಿಕೊಡುವ ದೃಷ್ಟಿಯಲ್ಲಿ ಮುಂಚಿತವಾಗಿ ಕೂಲಿ ಪಾವತಿಸಿ ಕಾರ್ಮಿಕರನ್ನು ಕರೆದೊಯ್ಯುವ ಬಗ್ಗೆ ಸಲಹೆಗಳು ಬಂದವು.

ಕಾರ್ಮಿಕರಿಗೂ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಿಗುವಂತೆ ಮಾಡುವದು, ಮುಂತಾದ ಸಲಹೆ ಸೂಚನೆಗಳು ಬಂದವು. ಆದರೆ ಇವೆಲ್ಲ ಒಮ್ಮೆಲೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಸಭೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಯಿತು. ಕಾರ್ಮಿಕರ ವೇತನ ನಿಯಂತ್ರಣದ ಈ ಸಭೆಯಲ್ಲಿನ ನಿರ್ಣಯಗಳ ಬಗ್ಗೆ ಎಲ್ಲರೂ ಹರ್ಷ ವ್ಯಕ್ತಪಡಿಸಿದರು.

ಸಭೆಯಲ್ಲಿ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ, ಗೌಂಡಿ ಅಸೋಸಿಯೇಶನ್‌ನವರೂ ಆಗಿರುವ ನಗರಸಭೆಯ ಸದಸ್ಯ ಹನುಮಂತ ತಳವಾರ, ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ್, ಆನಂದು ನಾಯ್ಕ, ಸಮೀರ್ ನಾಯ್ಕ, ಫೆಬ್ರಿಕೇಶನ್ ಅಸೋಸಿಯೇಶನ್ ಅಧ್ಯಕ್ಷ ಸದಾನಂದ ನಾಯ್ಕ, ಸಂತೋಷ್ ಸೈಲ್, ಮಹೇಶ್ ಥಾಮ್ಸೆ, ರಾಘವೇಂದ್ರ ಆಚಾರಿ, ರಮೇಶ್, ಸ್ಯಾಮ್ಸನ್ ಡಿಸೋಜಾ, ಗುತ್ತಿಗೆದಾರರಾದ ದೀಪಕ್ ನಾಯ್ಕ,ಸುಮೀತ್ ಅಸ್ನೋಟ್ಟಿಕರ್, ಛತ್ರಪತಿ ಮಾಳ್ಸೇಕರ್,ಮುರಳಿ ಗೋವೇಕರ್, ಅನೀಲ್ ಮಾಳ್ಸೇಕರ್, ಸಿದ್ದಾರ್ಥ ನಾಯಕ, ಮುಂತಾದವರು ಪಾಲ್ಗೊಂಡಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!