ಸಮಯದ ಸದುಪಯೋಗಕ್ಕೆ ಸಚಿವ ಎಸ್.ಅಂಗಾರ ಕರೆ
ಮಂಗಳೂರು,ಆ.22, 2022: ಸಮಯವನ್ನು ಸದುಪಯೋಗ ಮಾಡಿಕೊಂಡು ಸಾಧಕರಾಗುವತ್ತ ವಿದ್ಯಾರ್ಥಿಗಳು ಚಿತ್ತ ಹರಿಸಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಕರೆ ನೀಡಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆ.22ರ ಸೋಮವಾರ ಸಂಜೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೇ ಓದಿನಲ್ಲಿ ಕಳೆಯಬೇಕು, ಆರ್ಥಿಕವಾಗಿ ಅಥವಾ ಬಡತನದಿಂದಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು ಎಂಬ ಉದ್ದೇಶದಿಂದ ಸರ್ಕಾರ ವಿದ್ಯಾರ್ಥಿ ನಿಲಯಗಳನ್ನು ತೆರೆದಿದೆ, ಸರ್ಕಾರ ನೀಡುವ ಈ ರೀತಿಯ ಪ್ರೋತ್ಸಾಹದ ಲಾಭ ಪಡೆದು ವಿದ್ಯಾರ್ಥಿಗಳು ಉತ್ತಮವಾಗಿ ಶಿಕ್ಷಣ ಪಡೆದು ಸಾಧಕರಾಗಬೇಕು, ಆ ಮೂಲಕ ಸರ್ಕಾರ ನೀಡುವ ಸೌಲಭ್ಯಗಳ ಸದ್ಭಳಕೆಯಾಗಬೇಕು ಹಾಗೂ ವಿದ್ಯಾರ್ಥಿ ನಿಲಯಗಳು ಮಹತ್ವ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿ ನಿಲಯಗಳ ಕೆಲವೇ ಕೆಲವು ವಿದ್ಯಾರ್ಥಿಗಳು ಸಾಧನೆ ಮಾಡಿದರೆ ಸಾಲದು, ಎಲ್ಲರೂ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು, ಅದಕ್ಕೆ ಛಲಬೇಕು ಹಾಗೂ ಪ್ರಯತ್ನವೂ ಇರಬೇಕು ಎಂದ ಅವರು, ಹಿರಿಯರ ತ್ಯಾಗ ಹಾಗೂ ಪರಿಶ್ರಮವನ್ನು ಸ್ಮರಿಸಿ ನಾವು ಕೂಡ ಅವರಂತೆಯೇ ಆಗಬೇಕು ಎನ್ನುವ ಭಾವನೆಗಳು ರೂಪುಗೊಂಡಾಗಷ್ಟೇ ಅವರಂತಾಗಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ವೇದಿಕೆಯಲ್ಲಿದ್ದರು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಶ್ಮಿ ಸ್ವಾಗತಿಸಿದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿದರು. ನಂತರದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೇರವೇರಿತು.