ಉತ್ತರ ಕನ್ನಡ ಮೀನುಗಾರರ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ

 ಉತ್ತರ ಕನ್ನಡ ಮೀನುಗಾರರ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ
Share this post

ಬೆಂಗಳೂರು, ನ 04, 2022: ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಸ್ಯೆಗಳ ಬಗ್ಗೆ ವಿಧಾನಸೌದದಲ್ಲಿ ನ 03 ರಂದು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕೊಠಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಅಧಿಕಾರಿಗಳು ಮತ್ತು ಮೀನುಗಾರರೊಂದಿಗೆ ಸುಧೀರ್ಘ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

2022-23 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಯಾಂತ್ರಿಕ ದೋಣಿಗಳ ಬೇಡಿಕೆ ಉತ್ತರ ಕನ್ನಡ ಜಿಲ್ಲೆಗೆ ಬಹುಪಾಲು ಇದ್ದು, ಅರ್ಜಿ ಸಲ್ಲಿಸಿದ ಮೀನುಗಾರರಿಗೆ ಮಂಜೂರು ಮಾಡಬೇಕೆಂಬ ಪ್ರಸ್ತಾಪದ ಬಗ್ಗೆ ಉತ್ತರಿಸಿದ ಸಚಿವ ಅಂಗಾರ, ಇಲಾಖೆಯ ಮಾರ್ಗಸೂಚಿಯಂತೆ ಆಳ ಸಮುದ್ರದ ಮೀನುಗಾರಿಕೆಯ ದೋಣಿಗಳು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಬೇಡಿಕೆಯನ್ನು ಅವಲಂಬಿಸಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಪರ್ಸಿನ್ ಬೋಟ್‌ಗಳ ವಿತರಣೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಳೆದ ವರ್ಷದ ಬಜೆಟ್‌ನಲ್ಲಿ 4000 ಮೀನುಗಾರಿಕಾ ಮನೆಗಳ ಮಂಜೂರಾತಿಯನ್ನು ಪಡೆದಿದ್ದು, ವಸತಿ ರಹಿತ ಮೀನುಗಾರರ ಮನೆಗಳಿಗಾಗಿ ಬೇಡಿಕೆ ಸಲ್ಲಿಸಿದಂತೆಯೇ ಪ್ರತಿ ಕ್ಷೇತ್ರಗಳಿಗೆ ಕೊಟ್ಟಿರುವ ಮನೆಗಳನ್ನು ಅವಲಂಬಿಸಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೆ ಹೆಚ್ಚು ಮನೆಗಳ ಮಂಜೂರಾತಿ ಮಾಡುವುದಾಗಿ ಸಚಿವ ಅಂಗಾರ, ತಮ್ಮನ್ನು ಭೇಟಿಯಾದ ಉತ್ತರ ಕನ್ನಡದ ಜಿಲ್ಲೆಯ ಮೀನುಗಾರರ ನಿಯೋಗಕ್ಕೆ ಆಶ್ವಾಸನೆ ನೀಡಿದರು.

ನಾಡದೋಣಿಯ ಸೀಮೆ ಎಣ್ಣೆ ಬಗ್ಗೆ ಚರ್ಚಿತವಾಗಿ, ಹೊಂದಿರುವ 3 ಲಕ್ಷ ಕಿಲೋ ಲೀಟರ್ ಸೀಮೆ ಎಣ್ಣೆಯನ್ನು ತುರ್ತಾಗಿ ಹಂಚುವ ಕ್ರಮ ಕೈಗೊಂಡಿದ್ದು, ಹೆಚ್ಚಿನ ಬೇಡಿಕೆಗಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಲಾಗುವುದು ಮತ್ತು ಅತಿ ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಈಗಾಗಲೇ ಉತ್ತರ ಕನ್ನಡದ ಭಟ್ಕಳವೂ ಸೇರಿದಂತೆ ಕೆಲವು ಭಾಗಗಳಲ್ಲಿ ಹೂಳೆತ್ತುವ ಕಾಮಗಾರಿಗೆ ಟೆಂಡರ್ ಕೊಟ್ಟಿದ್ದು ಇನ್ನು ಹದಿನೈದು ದಿನಗಳಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಅಭಿವೃದ್ಧಿ ಬಗ್ಗೆ ಮೀನುಗಾರಿಕಾ ನಿಯೋಗದ ಮುಖಂಡ ಹುವಾ ಖಂಡೇಕರ್ ಅವರ ನೇತೃತ್ವದ ತಂಡದೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಶ್ರೀ ದಿನಕರ ಶೆಟ್ಟಿ, ವೇದವ್ಯಾಸ ಕಾಮತ್, ಗಣಪತಿ ಉಳ್ವೇಕರ್, ರವಿ ಕುಮಾರ್, ಮೀನುಗಾರಿಕೆ ಇಲಾಖೆ ನಿರ್ದೇಶಕ ಶ್ರೀ ರಾಮಾಚಾರಿ ಹಾಗೂ ಅವರ ತಂಡ, ಬಂದರು ಇಲಾಖೆಯಿಂದ ರಾಥೋಡ್ ಹಾಗೂ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!