ಉಡುಪಿ ಚಂದ್ರಮೌಳೀಶ್ವರ ದೇವಳದಲ್ಲಿ ಯಜುರುಪಾಕರ್ಮ ಆಚರಣೆ

 ಉಡುಪಿ ಚಂದ್ರಮೌಳೀಶ್ವರ ದೇವಳದಲ್ಲಿ ಯಜುರುಪಾಕರ್ಮ ಆಚರಣೆ
Share this post

ಶ್ರಾವಣ ಮಾಸದ ಪೌರ್ಣಮಿಯಂದು ಮುಂಜಾನೆ ಸೂರ್ಯೋದಯ ಕಾಲದಲ್ಲಿ ಉಡುಪಿಯ ಚಂದ್ರಮೌಳೀಶ್ವರ ದೇವಳದಲ್ಲಿ ಅರ್ಚಕರು ಹಾಗೂ ವೇದಮೂರ್ತಿ ಮನೋಹರ ತಂತ್ರಿಯವರ ನೇತೃತ್ವದಲ್ಲಿ ಉತ್ಸರ್ಜನ – ಯಜುರ್ ಉಪಾಕರ್ಮ ಸಾಂಗವಾಗಿ ನೆರವೇರಿದವು.

ದೇವ ಋಷಿ ತರ್ಪಣ, ಯಮತರ್ಪಣ, ಪಿತೃ ತರ್ಪಣ, ನವಕಾಂಡ ಋಷಿಗಳನ್ನು ಮಂಡಲ ಮಧ್ಯೆ ಆಹ್ವಾನಿಸಿ ಹವಿಸ್ಸು ತರ್ಪಣಾದಿ ಕಾರ್ಯಕ್ರಮಗಳು, ಯಜ್ಞೋಪವೀತ ಧಾರಣೆಗೆ ಸಂಬಂಧಪಟ್ಟಂತೆ ಹೋಮ ಹವನಾದಿಗಳು ದಾನ ಧಾರಣೆಗಳು ಕ್ರಮವತ್ತಾಗಿ ಸಂಪನ್ನಗೊಂಡಿತು.

ತದ ನಂತರ ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ದೇವ ಋಷಿ ಪಿತೃ ತರ್ಪಣ ಸಲ್ಲಿಸಲಾಯಿತು. ಎರಡು ನೂತನ ಉಪಾಕರ್ಮದ ವಟುಗಳಿಗೆ ಅಗ್ನಿಕಾರ್ಯ ಇತ್ಯಾದಿ ವಿಧಿ ವಿಧಾನಗಳನ್ನು ನಡೆಸಲಾಯಿತು. ಸುಮಾರು 50 ಕ್ಕೂ ಹೆಚ್ಚು ಯಜುರ್ವೇದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಜ್ಞೋಪವೀತ ಧಾರಣೆ ನಡೆಸಿದರು.

ಪ್ರತೀ ವರ್ಷ ಶ್ರಾವಣ ಮಾಸದ ಪೌರ್ಣಮಿಯಂದು ಯಜುರ್ ಉಪಾ ಕರ್ಮ ಸಂಪನ್ನಗೊಳ್ಳುತ್ತದೆ. ವೇದ ಅಧ್ಯಯನ ಹಾಗೂ ವೇದಾಂಗ ಅಧ್ಯಯನ ಪೂರ್ವಕವಾಗಿ ಗುರುಕುಲ ಪದ್ಧತಿಯಲ್ಲಿ ಈ ಉತ್ಸರ್ಜನ – ಉಪಾಕರ್ಮ ವಿಧಿಯ ಆಚರಣೆ ಮುಂದುವರಿದಿದೆ. ಆದರೆ ಪ್ರಸ್ತುತ ಕಾಲದಲ್ಲಿ ಈ ರೀತಿಯ ಅಧ್ಯಯನ ವಿಧಾನ ಕಡಿಮೆಯಾಗುತ್ತಿದ್ದರೂ ವೇದ ಮಂತ್ರೋಚ್ಛಾರಗಳ ದೋಷ ನಿವಾರಾಣಾರ್ಥವಾಗಿಯು ವರ್ಷಕ್ಕೊಮ್ಮೆ ಈ ವ್ಯವಸ್ಥೆಗಳು ನಡೆಯ ಬೇಕಾಗಿದೆ.

ಯಾವುದೇ ವಸ್ತುವಿನ ಅತಿಬಳಕೆಯಿಂದ ಅದರ ಸಾರಸತ್ವಗಳಲ್ಲಿ ವ್ಯತ್ಯಯ ಆಗುವುದು ಸ್ವಾಭಾವಿಕ. ಈ ವಿಚಾರ ಅದೇ ರೀತಿ ಸ್ವರ ವರ್ಣ ಅಕ್ಷರ ಲೋಪ ಇತ್ಯಾದಿ ಮಿತ್ಯಾಚರಣೆಗಳಿಂದ ವೇದಾಧ್ಯಯನ, ಮಂತ್ರೋಚ್ಛಾರಕ್ಕೂ ಇದು ಅನ್ವಯವಾಗುತ್ತದೆ. ಸಂಸ್ಥೆಗಳ, ಸದಸ್ಯತನದ ನವೀಕರಣ ಮಾಡುವಂತೆ ಪ್ರತೀ ವರ್ಷವೂ
ಈ ಹೋಮ ಹವನಾದಿ ತರ್ಪಣಗಳ ಮೂಲಕ ಈ ಪ್ರಕ್ರಿಯೆಗಳನ್ನು ಪುನಃ ಸತ್ವಯುತ, ಶಕ್ತಿಯುತವನ್ನಾಗಿಸಬೇಕಾಗುತ್ತದೆ. ಇಲ್ಲಿ ಇದು ಹೇಗೆ ಅನ್ನುವ ವಿಚಾರ.

ಈ ದಿನ ಹಯಗ್ರೀವ ರೂಪಿ ಪರಮಾತ್ಮ ಈ ವೇದಗಳನ್ನು ರಕ್ಷಣೆ ಮಾಡಿದ ದಿನ ಎಂದು ಶಾಸ್ತ್ರ ಹೇಳುತ್ತದೆ. ಈ ವೇದಗಳನ್ನು ಮೌಖಿಕವಾಗಿ ಈ ವರೆಗೆ ರಕ್ಷಣೆ ಮಾಡಿಕೊಂಡು ಈ ಪೀಳಿಗೆಯವರೆಗೆ ತಲುಪಿಸಿದವರು ದೇವ ಋಷಿಗಳು. ಹಾಗಾಗಿ ಈ ದಿನ ಅದರ ಮೂಲ ಧಾತುಗಳಾದ ಆರುಂಧತಿ ಸಹಿತ ಸಪ್ತಋಷಿಗಳನ್ನು, ವೇದವ್ಯಾಸರನ್ನು ಸ್ಮರಣೆ ಮಾಡಬೇಕಾಗುತ್ತದೆ.

ಒಬ್ಬ ಮನುಷ್ಯ ಹುಟ್ಟುವಾಗಲೇ ದೇವ, ಋಷಿ’ ಪಿತೃ ಹೀಗೆ ಪಂಚ ಋಣಗಳನ್ನು ಹೊತ್ತುಕೊಂಡು ಭೂಮಿಗೆ ಬರುತ್ತಾನೆ. ಹಾಗಾಗಿ ಅವರಿಗೆ ಈ ಪುಣ್ಯ ಕಾಲದಲ್ಲಿ ಅವರಿಗೆ ತರ್ಪಣವನ್ನು ನೀಡುವುದರ ಮೂಲಕ ಒಂದಷ್ಟು ಋಣವನ್ನು ತೀರಿಸಬಹುದು ಎನ್ನುವುದು ಬಲ್ಲವರ ಅಭಿಪ್ರಾಯ.

ಯಜ್ಞೋಪವೀತ ಧಾರಣೆಯ ಈ ಪರ್ವಕಾಲದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ಆಚರಿಸಲಾಗುತ್ತದೆ. ಪ್ರಾರಂಭದಲ್ಲಿ ಪುಣ್ಯಾಹವಾಚನ, ಪಂಚಗವ್ಯ ಮೇಲಣ, ಋಷಿ ತರ್ಪಣ, ಉತ್ಸರ್ಜನಾಂಗ ಹೋಮ, ದೇವ, ಋಷಿ, ಪಿತೃತರ್ಪಣ, ಹವಿಸ್ಸು, ಯಜ್ಞೋಪವೀತ ಪ್ರತಿಷ್ಟಾಪನೆ, ಯಜ್ಞೋಪವೀತ ಹೋಮ, ಬ್ರಹ್ಮಯಜ್ಞ, ದಾನ, ಧಾರಣ, ವರುಣ ಪ್ರಾರ್ಥನೆ’ ವಿರಜಾ ಜಯಾದಿ ಹೋಮ, ಮಂತ್ರಾಕ್ಷತೆ ಅಧಿಕಾರವಿದ್ದವರು ತಿಲಮುಖೇನ ಸಮಸ್ತ ಪಿತೃತರ್ಪಣ ಆಚಾರ್ಯ ತರ್ಪಣ ನಂತರ ಯಮತರ್ಪಣ ಇತ್ಯಾದಿ ಪ್ರಕ್ರಿಯೆಗಳ ಆಚರಣೆಯ ಮೂಲಕ ಉಪಾಕರ್ಮ ಸಂಪನ್ನಗೊಳ್ಳುತ್ತದೆ. ಈ ವೃತದಲ್ಲಿ ತೊಡಗುವವರು ಒಂದು ಹೊತ್ತಿನ ಅನ್ನ ಪ್ರಸಾದವನ್ನು ಸ್ವೀಕರಿಸಬೇಕು ಎಂಬ ನಿಯಮವಿದೆ.

ಲೇಖನಃ ರಾಜೇಶ್ ಭಟ್ ಪಣಿಯಾಡಿ

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!