ಸಂಪನ್ಮೂಲಗಳ ಸದ್ಬಳಕೆಯಿಂದ ರಾಷ್ಟ್ರದ ಉನ್ನತಿ: ಜಯಪ್ಪ

 ಸಂಪನ್ಮೂಲಗಳ ಸದ್ಬಳಕೆಯಿಂದ ರಾಷ್ಟ್ರದ ಉನ್ನತಿ: ಜಯಪ್ಪ
Share this post

ಉಜಿರೆ: ಆರ್ಥಿಕ ಬಿಕ್ಕಟ್ಟು ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುತ್ತದೆ. ಲಭ್ಯ ಸಂಪನ್ಮೂಲಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬುದರ ಮೇಲೆ ರಾಷ್ಟ್ರದ ಉನ್ನತಿ ನಿರ್ಧಾರವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಕೆ.ಎಸ್. ಜಯಪ್ಪ ಹೇಳಿದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜು ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ‘ವಲ್ಡ್ ಎಕಾನಮಿ ಕ್ರೈಸಿಸ್ ಲರ್ನಿಂಗ್ ಆಂಡ್ ವೇ ಔಟ್’ ಎಂಬ ರಾಜ್ಯ ಮಟ್ಟದ ಸೆಮಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.

“ನಮ್ಮ ದೇಶದಲ್ಲಿ ನೈಸರ್ಗಿಕ ಸಂಪನ್ಮೂಲದ ಜತೆಗೆ ಮಾನವ ಸಂಪನ್ಮೂಲವೂ ಹೇರಳವಾಗಿದೆ. ಜಗತ್ತಿನ ಇತರೆ ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದರೂ ಭಾರತವು ಆರ್ಥಿಕವಾಗಿ ಮುನ್ನಡೆಯುತ್ತ ಸಾಗಿದೆ. ಇದಕ್ಕೆ ಕಾರಣ ಸಂಪನ್ಮೂಲಗಳ ಸಮರ್ಪಕ ಬಳಕೆ” ಎಂದು ಅವರು ಅಭಿಪ್ರಾಯಪಟ್ಟರು. 

ಏಷ್ಯಾದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆಗಳು ಶೇ. ಇಪ್ಪತ್ತೆರಡರಿಂದ ಇಪ್ಪತ್ತೈದರಷ್ಟಿದೆ. ಅಮೆರಿಕಾದಲ್ಲೂ ಶೇ. ನಲವತ್ತರಷ್ಟು ಕುಂಠಿತವಾಗುವ ಸಂಭವನೀಯತೆ ಇದೆ. ಆದರೆ ಭಾರತದಲ್ಲಿ ಇದು ಶೂನ್ಯವಾಗಿದ್ದು, ಆರ್ಥಿಕತೆ ಸದೃಢವಾಗಿದೆ ಎಂದು ವಿಶ್ಲೇಷಿಸಿದರು.

ಮುಖ್ಯ ಅತಿಥಿ, ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕ ಪ್ರೇಮ್ ಶೇಖರ್ ಮಾತನಾಡಿ, “ಸಂಪನ್ಮೂಲಗಳ ಸದ್ಬಳಕೆ ಅತೀ ಅವಶ್ಯವಾಗಿದ್ದು, ಒಂದು ವೇಳೆ ನಾವು ಈ ವಿಚಾರದಲ್ಲಿ ಅಸಡ್ಡೆ ತೋರಿದರೆ ಮುಂದೆ ಪಶ್ಚಾತ್ತಾಪಪಡಬೇಕಾಗುತ್ತದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಮಾತನಾಡಿ, ಭಾರತದ ಆರ್ಥಿಕತೆಯು ಕೇವಲ ಬಹುರಾಷ್ಟ್ರೀಯ ಕಂಪೆನಿಗಳಿಂದ ಮಾತ್ರವಲ್ಲ, ಚಿಕ್ಕ ಚಿಕ್ಕ ಸ್ಟಾರ್ಟ್ ಅಪ್ ಗಳಿಂದ ಬೆಳೆಯುತ್ತಿದೆ ಎಂದು ಪ್ರತಿಪಾದಿಸಿದರು.

“ವೈಯಕ್ತಿಕ ಬದುಕಿನಲ್ಲಿ ನಮ್ಮ ಖರ್ಚಿನ ಪ್ರಮಾಣ ಹಾಗೂ ಆದಾಯದ ಮೂಲವನ್ನು ತಾಳೆ ಹಾಕಿ ನೋಡಬೇಕು. ಇವುಗಳ ಆಧಾರದಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಯ ಮಟ್ಟ ನಿರ್ಧಾರವಾಗುತ್ತದೆ” ಎಂದು ಅವರು ತಿಳಿಸಿದರು.

ಕೆ.ಎಸ್.ಎಸ್. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶಶಿ ಉಪಸ್ಥಿತರಿದ್ದರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪ ಪ್ರಾಂಶುಪಾಲ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ. ಜಯಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಾಧ್ಯಾಪಕ ಮಹೇಶ್ ಕುಮಾರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಧನ್ಯ ಹಾಗೂ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!