ಗ್ರಾಮೀಣ ಭಾಗದ ಜನರ ಸಮಸ್ಯೆ ಬಗೆಹರಿಸಲು ಹಳ್ಳಿ ಭೇಟಿ : ಜಿಲ್ಲಾಧಿಕಾರಿ ಕೂರ್ಮರಾವ್
ಉಡುಪಿ, ಮೇ 27, 2022: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತವು ಹಳ್ಳಿಗೆ ಭೇಟಿ ನೀಡಿದೆ. ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಹೆಬ್ರಿ ತಾಲೂಕಿನ ವರಂಗ ಗ್ರಾಮ ವ್ಯಾಪ್ತಿಯ ಮುನಿಯಾಲಿನ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ದೂರದ ಗ್ರಾಮೀಣ ಪ್ರದೇಶದ ಜನರಿಗೆ ತಾವಿದ್ದ ಸ್ಥಳದಲ್ಲಿಯೇ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಿ, ಸ್ಪಂದಿಸಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಸಮುದಾಯಗಳ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳು ಸೇರಿದಂತೆ ಒಟ್ಟು 145 ಅರ್ಜಿಗಳು ಬಂದಿದ್ದು, ಹೆಚ್ಚಿದಾಗಿ ನಿವೇಶನ ನೀಡುವ ಬಗ್ಗೆ, ಸ್ಮಶಾನ ಜಾಗ ಕಾಯ್ದಿರಿಸುವುದು, ವಿದ್ಯುತ್ ಕಲ್ಪಿಸುವುದು, ರಸ್ತೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಕೋರಿರುವುದು ಕಂಡುಬಂದಿದ್ದು, ಇವುಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ, ಕಾನೂನಿನ ವ್ಯಾಪ್ತಿಯಲ್ಲಿ ಇಂದೇ ಬಗೆಹರಿಸಲಾಗವುದು ಎಂದು ಹೇಳಿದರು.
ಮಳೆಗಾಲದ ಹಿನ್ನೆಲೆ, ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಯಿಂದ ಕೀಟ ಜನ್ಯ ರೋಗಗಳೂ ಸೇರಿದಂತೆ ಡೆಂಗ್ಯೂ ಪ್ರಕರಣಗಳು ಹರಡುವ ಸಾಧ್ಯತೆ ಇರುವ ಹಿನ್ನೆಲೆ, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವುದರ ಜೊತೆಗೆ, ಮಳೆಯ ನೀರು ನಿಲ್ಲದಂತೆ ನೋಡಿಕೊಂಡು ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಇಂದು ಎಲ್ಲಾ ಇಲಾಖಾ ಅಧಿಕಾರಿಗಳು ತಮ್ಮ ಈ ವ್ಯಾಪ್ತಿಯಲ್ಲಿ ಬರುವ ಅಧೀನ ಕಚೇರಿಗಳಾದ ಶಾಲೆ, ಅಂಗನವಾಡಿ, ವಸತಿ ನಿಲಯ, ಆರೋಗ್ಯ ಕೇಂದ್ರ ಸೇರಿದAತೆ ಮತ್ತಿತರ ಕಚೇರಿಗಳಿಗೆ ಇಂದು ತಪ್ಪದೇ ಭೇಟಿ ನೀಡಿ, ಅಲ್ಲಿನ ಕಾರ್ಯ ಚಟುವಟಿಕೆ ಪರಿಶೀಲಿಸಿ, ಏನೇ ಸಮಸ್ಯೆಗಳು ಇದ್ದಲ್ಲಿ ಬಗೆಹರಿಸಬೇಕೆಂದು ಸೂಚನೆ ನೀಡಿದರು.
ಸಾರ್ವಜನಿಕ ಉಪಯೋಗಕ್ಕೆ ಅವಶ್ಯಕವಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಇಲಾಖಾ ಅಧಿಕಾರಿಗಳ ಆದ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು ಸೂಚಿಸಿದ ಅವರು, ಶಾಲೆಗಳ ದುರಸ್ಥಿ, ಕಾಂಪೌಂಡ್ ನಿರ್ಮಾಣ, ಮೈದಾನ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬೇಕು ಎಂದರು.
ಮೆಸ್ಕಾಂ ನಿರ್ದೇಶಕ ದಿನೇಶ್ ಪೈ ಮಾತನಾಡಿ, ಹಳ್ಳಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಲು ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ನಗರ ಪ್ರದೇಶದಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳು ಗ್ರಾಮಗಳ ಮಟ್ಟದಲ್ಲಿಯೂ ದೊರಕಬೇಕು ಎಂದರು.
ಗ್ರಾಮೀಣ ಬಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಕಳೆದ ಕೊರೋನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದವರು ಗ್ರಾಮಗಳಿಗೆ ಹಿಂದಿರುಗಿ ವರ್ಕ್ ಫ್ರಂ ಹೋಮ್ ಕಾರ್ಯಗಳನ್ನು ಮಾಡಲು ಹಾಗೂ ಶಾಲಾ ವಿದ್ಯಾರ್ಥಿಗಳು ಆನ್ಲೈನ್ ತರಗತಿಯಲ್ಲಿ ಭಾಗವಹಿಸಲು ಅನಾನುಕೂಲ ಉಂಟಾಗಿದ್ದವು. ಈ ಸಮಸ್ಯೆ ಬಗೆಹರಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ 1, ಭೂ ಮಾಪನಾ ಇಲಾಖೆಯ 3, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 3 , ಆಹಾರ ಇಲಾಖೆಯ 3, ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ 3, ಪಂಚಾಯತ್ ರಾಜ್ ಇಲಾಖೆಯ 48, ಶಿಕ್ಷಣ ಇಲಾಖೆ 5, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ 2, ಪೊಲೀಸ್ ಇಲಾಖೆಯ 5, ಕಂದಾಯ ಇಲಾಖೆಯ 51, ಅರಣ್ಯ ಇಲಾಖೆಯ 5, ಲೋಕೋಪಯೋಗಿ ಇಲಾಖೆಯ 2, ಸಣ್ಣ ನೀರಾವರಿ ಇಲಾಖೆಯ 2 ಹಾಗೂ ಮೆಸ್ಕಾಂನ 7, ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ 3, ಕೆ.ಎಸ್.ಆರ್.ಟಿ.ಸಿ 2 ಅರ್ಜಿಗಳು ಸಂಬಂಧಿಸಿದಂತೆ ಒಟ್ಟು 145 ಅರ್ಜಿಗಳನ್ನು ಸ್ವೀಕರಿಸಲಾಯಿತು.