ಬಾಲ ಕಾರ್ಮಿಕ ಮುಕ್ತ ಮಾದರಿ ಜಿಲ್ಲೆಯಾಗಿಸಲು ಕ್ರಿಯಾ ಯೋಜನೆ: ಕೂರ್ಮಾರಾವ್

 ಬಾಲ ಕಾರ್ಮಿಕ ಮುಕ್ತ ಮಾದರಿ ಜಿಲ್ಲೆಯಾಗಿಸಲು ಕ್ರಿಯಾ ಯೋಜನೆ: ಕೂರ್ಮಾರಾವ್
Share this post

ಉಡುಪಿ, ಏ 30, 2022: ಉಡುಪಿ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಮಾದರಿ ಜಿಲ್ಲೆಯನ್ನಾಗಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ರಿಯಾ ಯೋಜನೆ ರೂಪಿಸಿ, ಅದರಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಕುಂದಾಪುರ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ, ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನಕ್ಕಾಗಿ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ  ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಬಾಲ ಕಾರ್ಮಿಕರ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಪತ್ತೆಯಾಗುವ ಬಾಲಕಾರ್ಮಿಕರಿಗೆ ಪುನರ್ವಸತಿ, ವಿದ್ಯಾಭ್ಯಾಸ, ರಕ್ಷಣೆ ನೀಡುವ ಕುರಿತಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು, ಅದರಂತೆ ಕಾರ್ಯನಿರ್ವಹಿಸುವಂತೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲೆಯ ಎಲ್ಲಾ ಕೈಗಾರಿಗೋದ್ಯಮಿಗಳಿಗೆ ಸಹ ಈಗಾಗಲೇ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಬಾಲ ಕಾರ್ಮಿಕರ ನೇಮಕ ಮಾಡಿಕೊಳ್ಳದಂತೆ ಮತ್ತು ಈ ಬಗ್ಗೆ ಇರುವ ಕಾನೂನಿನ ಪಾಲನೆ ಮಾಡುವ ಕುರಿತು ತಿಳಿಸಲಾಗಿದೆ ಎಂದರು.

ಬಾಲ್ಯ ವಿವಾಹ ಪದ್ಧತಿ ಜಿಲ್ಲೆಯಲ್ಲಿ ನಡೆಯದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆಯನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ತಳಮಟ್ಟದಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ, ಮಕ್ಕಳ ಹಿನ್ನೆಲೆ, ಪೋಷಕರ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುವAತೆ ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಇಲಾಖೆ ಅಧಿಕಾರಿಗಳು ಮಕ್ಕಳೊಂದಿಗೆ ಬೆರೆತು, ತಮ್ಮ ಇಲಾಖೆಯಲ್ಲಿ ಮಕ್ಕಳ ಅಭಿವೃದ್ಧಿಗೆ ಇರುವ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಮಕ್ಕಳಿಗೆ ನೀಡಿ, ಅದರ ಪ್ರಯೋಜನಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವೀಣಾ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ವಿವಿಧ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!