ಧರ್ಮಸ್ಥಳದಲ್ಲಿ 50 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ
ಧರ್ಮಸ್ಥಳ, ಏ 28, 2022: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರದಂದು ಐವತ್ತನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಂಭ್ರಮ.
ಸಂಜೆ ಗಂಟೆ 6.50 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 183 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಬೆಳಿಗ್ಯೆ ಹೆಗ್ಗಡೆಯವರ ನಿವಾಸದಲ್ಲಿ ವಧುವಿಗೆ ಸೀರೆ ಮತ್ತು ರವಕೆ ಹಾಗೂ ವರನಿಗೆ ಧೋತಿ, ಶಾಲು ವಿತರಿಸಿದರು. ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನ ಪ್ರವೇಶಿಸಿದರು. ಅಲ್ಲಿ ಹೆಗ್ಗಡೆಯವರು ಮತ್ತು ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿ ಶುಭ ಹಾರೈಸಿದರು.
ಸಂಜೆ 6.50 ರ ಗೋಧೂಳಿ ಲಗ್ನ ಸುಮೂಹರ್ತದಲ್ಲಿ ವೇದಘೋಷ, ಮಂತ್ರ, ಪಠಣದೊಂದಿಗೆ ಮಂಗಳವಾದ್ಯಗಳ ನಿನಾದದೊಂದಿಗೆ ಜಾತಿವಾರು ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿ ಮಂತ್ರಾಕ್ಷತೆ, ಹಾರ ವಿನಿಮಯ ಹಾಗೂ ಮಾಂಗಲ್ಯ ಧಾರಣೆಯೊಂದಿಗೆ ವಿವಾಹ ನೆರವೇರಿತು.
ನೂತನ ದಂಪತಿಗಳಿಂದ ಪ್ರತಿಜ್ಞಾ ವಿಧಿ: “ಧರ್ಮಸ್ಥಳದಲ್ಲಿ ಇಂದು ಮಂಗಲ ಮುಹೂರ್ತದಲ್ಲಿ ವಧೂ-ವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮದಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೂ ತುತ್ತಾಗದೆ ಬದುಕುತ್ತೇವೆ ಎಂದು ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆ,” ಎಂದು ದಂಪತಿಗಳು ಪ್ರತಿಜ್ಞೆ ಮಾಡಿದರು.
ಬಳಿಕ ನೂತನ ದಂಪತಿಗಳು ದೇವಸ್ಥಾನಕ್ಕೆ ಹೋಗಿ ದೇವರದರ್ಶನ ಪಡೆದು ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಸ್ವೀಕರಿಸಿ ತಮ್ಮ ಊರಿಗೆ ಮರಳಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ, ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು. ಮದುವೆಯ ಹೆಸರಿನಲ್ಲಿ ದುಂದು ವೆಚ್ಚ ಮಾಡಬಾರದು. ವಿವಾಹಕ್ಕಾಗಿ ಮಾಡುವ ದುಂದು ವೆಚ್ಚ, ವರದಕ್ಷಿಣೆ, ಜೀತಪದ್ಧತಿ ಮೊದಲಾದ ಸಮಸ್ಯೆಗಳನ್ನು ನಿವಾರಿಸಲಿಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಯಿತು ಎಂದರು.
ಇಂದು ಜಾತಿ-ಮತ, ಅಂತಸ್ತಿನ ಬೇಧ ಮರೆತು 60 ಜೊತೆ ಅಂತರ್ಜಾತೀಯ ವಿವಾಹವಾದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಿ ಅದು ಮುಂದೆ ಉದ್ಯೋಗ, ಶಿಕ್ಷಣ ಹಾಗೂ ಸರ್ಕಾರದ ನೆರವು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ಮದುವೆಯಾದವರು ಪರಸ್ಪರ ಅರಿತುಕೊಂಡು ಶಾಂತಿ-ಸಹನೆ ಮತ್ತು ಪ್ರೀತಿ-ವಿಶ್ವಾಸದಿಂದ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಮದುವೆಯ ಪಾವಿತ್ರ್ಯ ಮತ್ತು ಗಂಭೀರತೆಯನ್ನು ಅರ್ಥಮಾಡಿಕೊಂಡು ಸಾರ್ಥಕ ಜೀವನ ನಡೆಸಿ ಎಂದು ಹಾರೈಸಿದರು.
ಕಂದಾಯ ಸಚಿವ ಆರ್. ಅಶೋಕ್, ಗೋಲ್ಡನ್ ಸ್ಟಾರ್ ಗಣೇಶ್, ಶಾಸಕರುಗಳಾದ ಕೃಷ್ಣಪ್ಪ ಮತ್ತು ಹರೀಶ್ ಪೂಂಜ, ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅಥಿತಿಗಳಾಗಿ ಭಾಗವಹಿಸಿದ್ದರು.