ಸಹನಾ ಗುಣಗಳಿದ್ದರೆ ಶಾಂತಿಯುತ ಸಮಾಜ ನಿರ್ಮಾಣ : ಸಚಿವ ಅಂಗಾರ

 ಸಹನಾ ಗುಣಗಳಿದ್ದರೆ ಶಾಂತಿಯುತ ಸಮಾಜ ನಿರ್ಮಾಣ : ಸಚಿವ ಅಂಗಾರ
Share this post

ಉಡುಪಿ, ಏ 14, 2022: ಯಾವುದೇ ಮತ, ಪಂಗಡ, ಸಮುದಾಯ, ಪಂಥಗಳ ಆಚರಣೆಯಲ್ಲಿ ಭಗವಾನ್ ಮಹಾವೀರರು ತಿಳಿಸಿದ ಅಹಿಂಸೆ ಮತ್ತು ಸಹನಾ ಗುಣಗಳನ್ನೂ ಪ್ರ‍್ರತಿಯೊಬ್ಬರೂ ಪಾಲಿಸಿದ್ದಲ್ಲಿ ಸಮಾಜ ಹಾಗೂ ದೇಶದಲ್ಲಿ ಶಾಂತಿಯುತ ವಾತಾವರಣ ಇರಲಿದೆ ಎಂದು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಶಾಸಕ ಎಸ್.ಅಂಗಾರ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ನಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಯೋಜಿಸಲಾದ ಭಗವಾನ್ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಮತ, ಪಂಗಡ, ಧರ್ಮಗಳ ಆಚರಣೆಯ ಮೂಲ ಉದ್ದೇಶ ಮುಕ್ತಿ ಪಡೆಯುವುದಾಗಿದೆ, ಮುಕ್ತಿ ಪಡೆಯುವ ಹಾದಿಯಲ್ಲಿ ಅಹಿಂಸೆ ಮತ್ತು ಸಹನಾ ಗುಣಗಳು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದ್ದು, ಅಹಿಂಸೆಯನ್ನು ಹೊರತುಪಡಿಸಿ ಪಡೆಯುವ ಯಾವುದೇ ಸಾಧನೆಯಿಂದ ದೊರೆಯುವ ನೆಮ್ಮದಿಯು ಕೇವಲ ತಾತ್ಕಾಲಿಕವಾಗಿದೆ. ಮಾನವ ಬದುಕಿಗೆ ಪ್ರೇರಣೆಯಗುವ ಅನೇಕ ಗುಣಗಳನ್ನು ಭಗವಾನ್ ಮಹವೀರರು ತಮ್ಮ ಸಂದೇಶದಲ್ಲಿ ನೀಡಿದ್ದು, ಇದನ್ನು ಎಲ್ಲರೂ ಅರಿತು , ಪಾಲಿಸಿ, ತಮ್ಮ ಮುಂದಿನ ಪೀಳಿಗೆಗೂ ಸಹ ತಿಳಿಸುವ ಕಾರ್ಯವಾಗಬೇಕು ಎಂದರು.

 ಭಗವಾನ್ ಮಹಾವೀರರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದ, ಉದ್ಯಾವರ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾದ್ಯಾಪಕ ಡಾ.ಅರ್ಹಂತ ಕುಮಾರ್ ಮಾತನಾಡಿ, ಜೈನಧರ್ಮ ಎಂಬುದು ವೈಜ್ಞಾನಿಕ ಶಾಸ್ತ್ರ ಮತ್ತು ಅನ್ಯ ಜೀವಿಗಳಿಗೆ ಹಿಂಸಿಸದೇ ಶಿಸ್ತಿನಿಂದ ಬದುಕುವ ವಿಧಾನವಾಗಿದ್ದು, ಭಗವಾನ್ ಮಹಾವೀರರು ಇವುಗಳ ಆಚರಣೆ ಜೊತೆಗೆ ಇಂದ್ರಿಯ ಮತ್ತು ಮನಸ್ಸನ್ನು ನಿಗ್ರಹಿಸಿ ಅತ್ಯಂತ ಉನ್ನತ ಸ್ಥಾನಕ್ಕೇರಿದ ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದಾರೆ. ಅವರು ತಿಳಿಸಿದ ಮೂರು ಸಂದೇಶಗಳಾದ ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತ ಸಿದ್ದಾಂತಗಳ ಆಚರಣೆಯಿಂದ ಎಲ್ಲೆಡೆ ವಿಶ್ವ ಶಾಂತಿ, ವಿಶ್ವ ಪ್ರೇಮ ಮತ್ತು ವಿಶ್ವ ಭ್ರಾತೃತ್ವ ಮೂಡಲಿದ್ದು, 2600 ವರ್ಷಗಳ ಹಿಂದೆ ತಿಳಿಸಿದ ಅವರ ಸಂದೇಶಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದರು.

ಉಡುಪಿ ಶಾಸಕ ರಘುಪತಿ ಭಟ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ, ವಿವಿಧ ಇಲಾಖೆಯ ಅಧಿಕಾರಿಗಳು, ಜೈನ ಮಿಲನ್ ನ ಅಧ್ಯಕ್ಷ ಸುದೀರ್ ಕುಮಾರ್ ಜೈನ್, ನಿರ್ದೇಶಕ ಪ್ರಸನ್ನ ಕುಮಾರ್, ಕಾರ್ಯಾದ್ಯಕ್ಷ ರಾಜವರ್ಮ ಅರಿಗ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!