ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಡತ ವಿಲೇವಾರಿ ಅಭಿಯಾನ: ಆರ್. ಅಶೋಕ್

 ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಡತ ವಿಲೇವಾರಿ ಅಭಿಯಾನ: ಆರ್. ಅಶೋಕ್
Share this post


ಮಂಗಳೂರು,ಫೆ.19, 2022: ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಿನಪೂರ್ತಿ ಅಲ್ಲಿಯೇ ಮೊಕ್ಕಂ ಹೂಡಿ ಬಾಕಿ ಉಳಿದ ಕಡತಗಳ ವಿಲೇವಾರಿ ಅಭಿಯಾನ ನಡೆಸಲಾಗುವುದು ಎಂದು ಕಂದಾಯ ಸಚಿವರಾದ ಆರ್. ಅಶೋಕ್ ಘೋಷಿಸಿದರು.

ಅವರು ಶನಿವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡತ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಕಡತ ವಿಲೇವಾರಿ ಅಭಿಯಾನದಿಂದ ಪ್ರೇರಿತರಾದ ಸಚಿವರು, ರಾಜ್ಯಾದ್ಯಂತ ಕಡತ ವಿಲೇವಾರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಸ್ವತಃ ತಾವೇ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ತೆರಳಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಲ್ಲಿನ ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಕಿ ಉಳಿದ ಕಡತಗಳ ಇತ್ಯರ್ಥ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರದಿಂದ ಆಗಬೇಕಾದ ಕೆಲಸ ಕಾರ್ಯಗಳಿಗೆ ಹತ್ತಾರು ವರ್ಷ ಅಲೆದು ಅಲೆದು ಕೆಲಸ ಆಗದೇ ತೀವ್ರ ನಿರಾಸೆಗೊಂಡ ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಲಿದೆ. ಕಡತ ವಿಲೇವಾರಿ ಎಲ್ಲೆಡೆ ನಡೆಯಬೇಕು. ಆಯಾ ಕ್ಷೇತ್ರಗಳ ಶಾಸಕರು ತಾಲೂಕುಗಳಲ್ಲಿ ಒಂದು ದಿನ ಅಥವಾ ಒಂದು ವಾರ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಂಡರೆ ಜನಸಾಮಾನ್ಯರಿಗೆ ಸಾಕಷ್ಟು ಉಪಯೋಗವಾಗುತ್ತದೆ ಎಂದು ಹೇಳಿದರು.

ಕಡತ ವಿಲೇವಾರಿಯಂತಹ ಕಾರ್ಯಕ್ರಮ ಅಭಿಯಾನದಂತೆ ಕೈಗೊಳ್ಳಲಾಗಿದೆ, ಆ ಮೂಲಕ ಜಿಡ್ಡುಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸಲಾಗುತ್ತಿದೆ. ಸರ್ಕಾರದ ಸೌಲಭ್ಯಗಳು ತಲುಪದ ಅಸಹಾಯಕರು ಸಾಕಷ್ಟಿದ್ದಾರೆ. ಅವರಿಗೆ ಸವಲತ್ತುಗಳು ದೊರೆಯಬೇಕು. ವೃದ್ದಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನಕ್ಕಾಗಿ ಅರ್ಹರಿಗೆ ಕೂಡಲೇ ತಲುಪಬೇಕು. ಕಳೆದ ಬಾರಿ ಉಡುಪಿ, ಮಂಗಳೂರಿಗೆ ಭೇಟಿ ನೀಡಿದಾಗ ಮನೆ ಬಾಗಿಲಿಗೆ ಪಿಂಚಣಿ ಯೋಜನೆಯನ್ನು ಆರಂಭಿಸಲಾಯಿತು. ಪಿಂಚಣಿಗಾಗಿ ಅರ್ಹರನ್ನು ಅಲೆದಾಡಿಸಬಾರದು ಎಂಬ ಕಾರಣಕ್ಕೆ ಸರ್ಕಾರದ ಬಳಿಯೇ ಅವರ ದಾಖಲಾತಿಗಳು, ವಿಳಾಸ ಇರುವ ಕಾರಣ ಮನೆ ಬಾಗಿಲಿಗೆ ಪಿಂಚಣಿ ಒದಗಿಸುವ ವ್ಯವಸ್ಥೆ ರೂಪಿಸಲಾಗಿದೆ. ಕಂದಾಯ ಕಾಯ್ದೆಗೆ ತಿದ್ದುಪಡಿ, ಮೂರೇ ದಿನದಲ್ಲಿ ಕನ್ವರ್ಷನ್ ಮಂಜೂರು, ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆಗೆ ಹೀಗೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಒತ್ತುವರಿ ಜಮೀನು ಲೀಸ್‍ಗೆ:

 ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಒತ್ತುವರಿ ಜಮೀನಿನಲ್ಲಿರುವ ತೋಟಗಳನ್ನು 30 ವರ್ಷ ಅವಧಿಗೆ ಕೃಷಿಕರಿಗೆ ಲೀಸ್‍ಗೆ ನೀಡುವ ಚಿಂತನೆ ಇದೆ, ನಡೆಸಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಕುಮ್ಕಿ, ಕಾನ, ಬಾಣೆ ಜಮೀನು ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಬದ್ದವಾಗಿದೆ, ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ, ಕುಮ್ಕಿ ಅಥವಾ ಗೋಮಾಳ ಜಮೀನನ್ನು ಸಂಘಸಂಸ್ಥೆಗಳಿಗೆ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ, ಈ ಜಮೀನನ್ನು ರೈತರಿಗೆ ನೀಡಿ ನ್ಯಾಯ ಒಗದಿಸಲಾಗುವುದು ಎಂದು ತಿಳಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!