15ನೇ ಹಣಕಾಸು ಯೋಜನೆ ಅನುದಾನ ಸದ್ಬಳಕೆ ಆಗಬೇಕು: ಕೋಟ ಶ್ರಿನಿವಾಸ ಪೂಜಾರಿ
ಕಾರವಾರ ಫೆ. 11, 2022: ಕೋವಿಡ್ ಸಂಕಷ್ಠ ಸನ್ನಿವೇಶದ ನಡುವೆ ಕೂಡ ಕೇಂದ್ರ ಸರಕಾರ 15ನೇ ಹಣಕಾಸು ಯೋಜನೆಯ ಮೂಲಕ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಗರಿಷ್ಠ ಅನುದಾನವನ್ನು ನೀಡಿದ್ದು, ಇದರ ಸದ್ವಿನಿಯೋಗ ಮತ್ತು ಸದ್ಬಳಕೆ ಆಗಬೇಕೆಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರಿನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉತ್ತಮ ಸಾಧನೆಗೈದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯೋಜನೆಗೆ ಮತ್ತು ಯೋಚನೆಗೆ ಹೆಚ್ಚು ಶಕ್ತಿ ನೀಡುವಂತಹದ್ದು ಉದ್ಯೋಗ ಖಾತರಿ ಯೋಜನೆಯಾಗಿದೆ. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಅಧ್ಯಕ್ಷ, ಸದಸ್ಯರು ಸೇರಿ ವಿಚಾರ ಮಾಡಿ ನಮ್ಮ ಪಂಚಾಯತ್ ನಲ್ಲಿ ಎಷ್ಟು ಅನುದಾನವಿದೆ, ಉದ್ಯೋಗ ಖಾತರಿ ಯೋಜನೆ ಮೂಲಕ ಹೇಗೆ ಅನುದಾನ ಬಳಸಿಕೊಳ್ಳಬಹುದು ಎಂಬುದನ್ನು ಗಮನದಲ್ಲಿಟ್ಟಿಕೊಂಡು ಬಡವರ ಮನೆಗೆ ಬಾವಿ, ಶೌಚಾಲಯ, ರಸ್ತೆ, ಹೊಸ ಮನೆಗೆ ಎಷ್ಟು ಅನುದಾನ ನೀಡಬಹುದು ಎಂಬುದನ್ನು ಯೋಚನೆ ಮಾಡಿ ಸ್ಪಷ್ಟವಾದ ಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಬೇಕು. ಹೀಗೆ ಮಾಡಿದಲ್ಲಿ ಗ್ರಾಮದ ಅಭಿವೃದ್ಧಿಯಾಗುತ್ತದೆ. ಯೋಜನೆಯಡಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಅನುದಾನ ಹರಿದುಬರುವಂತಹ ವ್ಯವಸ್ಥೆ ಮಾಡಿ, ಇಂಜಿನಿಯರ್ ಸಹ ಅದಕ್ಕೆ ಪೂರಕವಾದಂತಹ ಯೋಜನಾ ವೆಚ್ಚಗಳನ್ನ ತಯಾರು ಮಾಡಿದ್ದೆ ಆದಲ್ಲಿ ಜನರಿಗೆ ಉದ್ಯೋಗವು ದೊರೆಯುವದರೊಂದಿಗೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗುತ್ತವೆ ಎಂದರು.
ಈಗಾಗಲೇ ಉ.ಕ ಜಿಲ್ಲೆಯು ಮಾದರಿ ಜಿಲ್ಲೆಯಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಇನ್ನೂ ಹೆಚ್ಚಿನ ಸಂಪನ್ಮೂಲಗಳನ್ನು ಕ್ರೊಡಿಕರಿಸಿ, ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಕಾರ್ಯಗಳನ್ನು ಕೈಗೊಂಡು ಜಿಲ್ಲೆಯು ದೇಶಕ್ಕೆ ಮಾಧರಿಯಾಗುವಂತೆ ಪ್ರಗತಿ ಸಾಧಿಸಬೇಕೆಂದರು..
ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನವನ್ನು ಮತ್ತಷ್ಟು ಬಳಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಯೋಜನೆಯ ಅನುದಾನವನ್ನು ಹೆಚ್ಚೆಚ್ಚು ಬಳಕೆ ಮಾಡಿಕೊಳ್ಳುವುದರ ಮೂಲಕ ಗ್ರಾಮೀಣ ಜನರಿಗೆ ಸಾಮಾಜಿಕ ಆರ್ಥಿಕ ಅನಕೂಲವಾಗುತ್ತದೆ. ಈ ಮೂಲಕ ಜಿಲ್ಲೆಯು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಜಿ.ಪಂ ಸಿ ಇ ಒ ಗಮನವರಿಸುವಂತಾಗಬೇಕೆಂದರು.
ಶಾಸಕಿ ರೂಪಾಲಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ, ಗಣಪತಿ ಡಿ ಉಳ್ವೇಕರ್, ಕಾರವಾರ ನಗರಸಭೆ ಅಧ್ಯಕ್ಷ ನಿತಿನ್ ಎಸ್ ಪಿಕಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್ ಸೇರಿದಂತೆ ಇತರರು ಇದ್ದರು.