ಉಸ್ತುವಾರಿ ಸಚಿವರ ಬದಲಾವಣೆ ಸರಿಯಲ್ಲ: ಮಾಧವ ನಾಯಕ
ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಳೆದ ಒಂದೂವರೆ ವರ್ಷಗಳಿಗಿಂತ ಹೆಚ್ಚು ಕಾಲದಿಂದ ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿರುವ ಶಿವರಾಮ ಹೆಬ್ಬಾರ್ ರನ್ನು ಹಾವೇರಿ ಜಿಲ್ಲೆಗೆ ವರ್ಗಾಯಿಸಿ, ಉತ್ತರ ಕನ್ನಡಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನೇಮಿಸಿರುವ ಸರ್ಕಾರದ ನಿರ್ಣಯ ಸರಿಯಲ್ಲ ಎಂಬ ಭಾವನೆ ನನ್ನದು.
ಕೋವಿಡ್ ಎರಡನೆ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಹೆಬ್ಬಾರ್ ಯಶಸ್ವಿಯಾಗಿದ್ದರು. ಜಿಲ್ಲೆಯ ಆರೋಗ್ಯ ಕ್ಷೇತ್ರ ವ್ಯಾಪಕ ಸುಧಾರಣೆ ಕಾಣುವಲ್ಲಿ ಅವರ ಶ್ರಮ ಸಾಕಷ್ಟಿದೆ. ಕೋವಿಡ್ ನಂತಹ ಸಂದಿಗ್ಧ ಕಾಲದಲ್ಲಿಯೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿರುವ ಅವರ ಕಾರ್ಯತತ್ಪರತೆಯನ್ನು ಜನತೆ ಮೆಚ್ಚಿಕೊಂಡಿದ್ದಾರೆ.
ಈಗಷ್ಟೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರೆಯುತ್ತಿದೆ. ಅದರ ಜೊತೆ ಕೋವಿಡ್ ಪರಿಸ್ಥಿತಿಯೂ ಇದೆ. ಇಂತಹ ವೇಳೆಯಲ್ಲಿ ಸಚಿವರನ್ನು ಬದಲಿಸಿದರೆ ಆಡಳಿತಾತ್ಮಕವಾಗಿ ಗೊಂದಲಗಳು, ಸಮಸ್ಯೆಗಳು ಉದ್ಭವಗೊಳ್ಳುವ ಸಾಧ್ಯತೆ ಹೆಚ್ಚು. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಓರ್ವ ಮುತ್ಸದ್ಧಿ ಸಚಿವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರಿಗೆ ಈ ಜಿಲ್ಲೆಯ ಆಡಳಿತ ನಿರ್ವಹಣೆಯನ್ನು ದೂರದ ಉಡುಪಿಯಿಂದ ಮಾಡುವದು ಕಷ್ಟವಾಗಬಹುದು.
ಪ್ರತಿ ಬಾರಿಯೂ ಅವರು ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗದು. ಅಲ್ಲದೆ ಇಲ್ಲಿನ ಜನರ ಸಂಕಷ್ಟ, ಸಮಸ್ಯೆಗಳು ಏನು ಎಂಬುದನ್ನು ಬೇರುಮಟ್ಟದಲ್ಲಿ ಅರಿತವರು ಶಿವರಾಮ ಹೆಬ್ಬಾರ್. ಹೀಗಾಗಿ ಅವರನ್ನೇ ಉಸ್ತುವಾರಿ ಸಚಿವರಾಗಿ ಮುಂದುವರೆಸುವದು ಸೂಕ್ತ ಎಂಬ ಅಭಿಪ್ರಾಯ ನನ್ನದು.
ಮಾಧವ ನಾಯಕ
ಜನಶಕ್ತಿ ವೇದಿಕೆ ಅಧ್ಯಕ್ಷರು
ಕಾರವಾರ