ಮತದಾರರ ಪಟ್ಟಿ ಯೊಂದಿಗೆ ಮನೆ-ಮನೆಗೆ ಭೇಟಿ ನೀಡಿ ವ್ಯಾಕ್ಸಿನ್ ಪಡೆಯದವರ ಪತ್ತೆಗೆ ಜಿಲ್ಲಾಧಿಕಾರಿ ಸೂಚನೆ

 ಮತದಾರರ ಪಟ್ಟಿ ಯೊಂದಿಗೆ ಮನೆ-ಮನೆಗೆ ಭೇಟಿ ನೀಡಿ  ವ್ಯಾಕ್ಸಿನ್ ಪಡೆಯದವರ ಪತ್ತೆಗೆ ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು,ಜ.21, 2022: ಸುಮಾರು17.53 ಲಕ್ಷಕ್ಕೂ ಹೆಚ್ಚಿನ ಮತದಾರರಿರುವ ಜಿಲ್ಲೆಯಲ್ಲಿ ಬಿಎಲ್‍ಒ (ಬೂತ್ ಮಟ್ಟದ ಅಧಿಕಾರಿ)ಗಳು ಮತದಾರರ ಪಟ್ಟಿಹಿಡಿದು ತಮ್ಮ ವ್ಯಾಪ್ತಿಗೊಳಪಡುವ ಮನೆ-ಮನೆಗಳಿಗೆ ಭೇಟಿ ನೀಡಿ ಕೋವಿಡ್ ವ್ಯಾಕ್ಸಿನ್ ಪಡೆಯದವರನ್ನು ಪತ್ತೆ ಮಾಡಿ, ಅವರಿಗೆ ಲಸಿಕೆ ಕೊಡಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ನಿರ್ದೇಶನ ನೀಡಿದರು.

ಅವರು ಜ.21ರ ಶುಕ್ರವಾರ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣವನ್ನು ತೀವ್ರಗೊಳಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ಸೂಚನೆಗಳನ್ನು ನೀಡಿದರು.

ಜಿಲ್ಲೆಯಲ್ಲಿ 1,861 ಬಿಎಲ್‍ಒಗಳಿದ್ದಾರೆ, ಅವರ ಮೇಲ್ವಿಚಾರಣೆಗಾಗಿ 186 ಸೂಪರ್ ವೈಸರ್‍ಗಳಿದ್ದಾರೆ, ಬಿಎಲ್‍ಒಗಳು ತಮ್ಮಲ್ಲಿರುವ ಮತದಾರರ ಪಟ್ಟಿ ಹಿಡಿದು ತಮ್ಮ ಬೂತ್ ವ್ಯಾಪ್ತಿಯ ಮನೆ-ಮನೆಗಳಿಗೆ ಭೇಟಿ ನೀಡಿ, ಆ ಮನೆಗಳಲ್ಲಿ 18 ವರ್ಷ ತುಂಬಿದವರನ್ನು ನಮೂನೆ 6ರಲ್ಲಿ ಅರ್ಜಿ ಭರ್ತಿ ಮಾಡಿ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ಮಾಡಬೇಕು. ಅದೇ ಮನೆಯಲ್ಲಿ 15 ವರ್ಷ ಮೇಲ್ಪಟ್ಟವರಿದ್ದಲ್ಲಿ ಅವರಲ್ಲಿ ಕೋವಿಡ್ ಲಸಿಕೆಯ ಮಾಹಿತಿ ಪಡೆಯಬೇಕು. ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಲಸಿಕೆ ನೀಡಲು ಸಂಬಂಧಿಸಿದ ವೈದ್ಯಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಬೇಕು. ಅದೇ ಮನೆಯಲ್ಲಿ ಮರಣ ಹೊಂದಿದವರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಅದನ್ನು ಪಟ್ಟಿಯಿಂದ ತೆಗೆಯುವ ಕ್ರಮವಹಿಸಬೇಕು. ಮುಖ್ಯವಾಗಿ ಅನಾರೋಗ್ಯ ಪೀಡಿತರಿದ್ದರೆ ಅವರು ವ್ಯಾಕ್ಸಿನ್ ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಲಸಿಕೆ ಪಡೆಯದಿದ್ದರೆ ಸಂಬಂಧಿಸಿದವರನ್ನು ಸಂಪರ್ಕಿಸಿ ವ್ಯಾಕ್ಸಿನ್ ಕೊಡಿಸಬೇಕು ಎಂಬ ಸೂಚನೆಗಳನ್ನು ನೀಡಿದರು.

ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವ್ಯಾಕ್ಸಿನ್ ಮೇಳವನ್ನು ಹಮ್ಮಿಕೊಳ್ಳುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಯವರು, ಮೇಳದಲ್ಲಿ ಮೊದಲ ಅಥವಾ ಎರಡನೇ ಡೋಸ್ ಲಸಿಕೆ ಕೊಡಿಸಬೇಕು. ಅದರ ಹೊರತಾಗಿ ಅಧಿಕಾರಿಗಳು ಮೈಕ್ರೋ ಯೋಜನೆಗಳನ್ನು ರೂಪಿಸಿಕೊಂಡು ಲಸಿಕೆ ಕೊಡಿಸಬೇಕು. ಕೋವಿಡ್ ಲಸಿಕಾಕರಣದಲ್ಲಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಗದಿತ ಗುರಿ ಸಾಧಿಸದ ವೈದ್ಯಕೀಯ ಅಧಿಕಾರಿಗಳಿಗೆ ತಾಲೂಕು ಮಟ್ಟದಲ್ಲಿ ನೋಟಿಸ್ ನೀಡುವಂತೆ ತಿಳಿಸಿದ ಅವರು, ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಿ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದರು.

ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಅದಕ್ಕಾಗಿ ಲಸಿಕೆ ಪಡೆದ ಸರ್ಟಿಫಿಕೇಟ್ ಅನ್ನು ಪರಿಶೀಲಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ತಿಳಿಸಿದ ಅವರು, ಎರಡನೇ ಡೋಸ್ ನಂತರ 9 ತಿಂಗಳ ಅವಧಿ ಪೂರೈಸಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಕೂಡಲೇ ಬೂಸ್ಟರ್ ಡೋಸ್ ಅನ್ನು ಕೊಡಸಬೇಕು. ಅದರಲ್ಲಿ ಶಿಕ್ಷಕರನ್ನು ಸೇರಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಸಹಾಯಕ ಆಯುಕ್ತರಾದ ಮದನ್ ಮೋಹನ್, ಎಲ್ಲಾ ತಾಲೂಕುಗಳ ತಹಶಿಲ್ದಾರರು, ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಲ್ಲಾ ಬಿಎಲ್‍ಒ ಸೂಪರ್ ವೈಜರ್‍ಗಳು, ಕಂದಾಯ ನಿರೀಕ್ಷಕರು ಹಾಗೂ ಸಂಬಂಧಿಸಿದವರು ವಚ್ರ್ಯೂವೆಲ್ ಮಾಧ್ಯಮದ ಮೂಲಕ ಭಾಗವಹಿಸಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!