ರೈತ ಕಾರ್ಮಿಕರ ಸಖ್ಯತೆಯಿಂದ ಮಾತ್ರವೇ ದೇಶದ ಸರ್ವಾಂಗೀಣ ಅಭಿವೃದ್ಧಿ: ಸುನಿಲ್ ಕುಮಾರ್ ಬಜಾಲ್
ಮಂಗಳೂರು, ಜ 20, 2022: ದೇಶವನ್ನಾಳುವ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳಿಂದ ದೇಶದ ಅನ್ನದಾತರು ತೀವ್ರ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೃಷಿ ರಂಗವೇ ದಿವಾಳಿ ಎದ್ದಿದ್ದು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತೊಂದು ಕಡೆ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕ ವರ್ಗದ ಬದುಕನ್ನೇ ನಾಶ ಮಾಡಲಾಗುತ್ತಿದೆ ಎಂದು ಸಿ.ಐ.ಟಿ.ಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ದೇಶದಲ್ಲಿ ನಡೆದ ಪ್ರಥಮ ರೈತ ಕಾರ್ಮಿಕರ ಸಖ್ಯತೆಯ ಮಹಾಮುಷ್ಕರದ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಆಳುವ ವರ್ಗಗಳು ಪ್ರಜ್ಞಾಪೂರ್ವಕವಾಗಿಯೇ ರೈತ ಕಾರ್ಮಿಕರ ಮೇಲೆ ದಾಳಿ ಹೆಚ್ಚಿಸಿ ಸಂಘಟಿತರಾಗದಂತೆ ಕುತಂತ್ರ ನಡೆಸುತ್ತಿದೆ. ಈ ಮೂಲಕ ಮತ್ತೆ ದೇಶವನ್ನು ಕಾರ್ಪೊರೇಟ್ ಕಂಪೆನಿಗಳ ಹಿಡಿತಕ್ಕೆ ಒಪ್ಪಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇಡೀ ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಸಮಾಜದಲ್ಲಿ ಸಂಪತ್ತನ್ನು ಸೃಷ್ಠಿಸುವ ಕಾರ್ಮಿಕ ಒಂದಾದರೆ ಮಾತ್ರವೇ ಆಳುವ ವರ್ಗದ ನೀತಿಗಳನ್ನು ಹಿಮ್ಮೆಟ್ಟಿಸುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಐ.ಟಿ.ಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು 40 ವರ್ಷಗಳ ಹಿಂದೆ ಮೊಳಗಿದ ರೈತ ಕಾರ್ಮಿಕರ ಸಖ್ಯತೆಯ ಘೋಷಣೆಯು ಕಳೆದ ಒಂದು ವರ್ಷಗಳಿಂದ ರೈತರು ನಡೆಸಿದ ಚಾರಿತ್ರಿಕ ಹೋರಾಟದಲ್ಲಿ ಮರುಕಳಿಸಿ ಚರಿತ್ರೆಯಲ್ಲಿ ಮೈಲುಗಲ್ಲಾಗಿ ಪರಿಣಮಿಸಿದೆ. ಫೆಬ್ರವರಿ 23, 24ರಂದು ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರವನ್ನು ಯಶಸ್ವಿ ಗೊಳಿಸುವ ಮೂಲಕ ಕಾರ್ಪೊರೇಟ್ ಕಂಪೆನಿಗಳ ಅಧಿಪತ್ಯಕ್ಕೆ ಸಡ್ಡುಹೊಡೆಯಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಿ.ಐ.ಟಿ.ಯು ಮಂಗಳೂರು ನಗರಾಧ್ಯಕ್ಷರಾದ ರವಿಚಂದ್ರ ಕೊಂಚಾಡಿಯವರು ಮಾತನಾಡುತ್ತಾ 90ರ ದಶಕದಿಂದ ಜಾರಿಗೊಂಡ ಜಾಗತೀಕರಣ ಉದಾರೀಕರಣ ಖಾಸಗೀಕರಣಗಳ ನೀತಿಗಳಿಂದ ದೇಶದ ಸಾರ್ವಜನಿಕ ಉದ್ದಿಮೆಗಳು ಭಾರೀ ಸಂಕಷ್ಟದಿಂದ ಕೂಡಿದ್ದು ಮಾತ್ರವಲ್ಲದೆ ಕಾರ್ಮಿಕ ವರ್ಗವೂ ಉದ್ಯೋಗ ನಷ್ಟದಿಂದ ಸವಲತ್ತುಗಳಿಂದ ವಂಚಿತಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಸಿ.ಐ.ಟಿ.ಯು ಮಂಗಳೂರು ನಗರ ಮುಖಂಡರಾದ ಬಾಬು ದೇವಾಡಿಗ,ಭಾರತಿ ಬೋಳಾರ, ಜಯಂತಿ ಶೆಟ್ಟಿ, ಅಶೋಕ್ ಶ್ರೀಯಾನ್, ಲೋಕೇಶ್ ಎಂ, ನೌಷಾದ್, ವಿಲ್ಲಿವಿಲ್ಸನ್, ಹರೀಶ್ ಕೆರೆಬೈಲ್, ಡಿ.ವೈ.ಎಫ್.ಐ ನಾಯಕರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ ಸೇರಿದಂತೆ ವಿವಿಧ ವಿಭಾಗದ ಕಾರ್ಮಿಕರು ಭಾಗವಹಿಸಿದ್ದರು.